

ನರಗುಂದ: ಸಮಾಜದಲ್ಲಿರುವ ಕಡುಬಡವರು, ನೊಂದವರ ಪರವಾಗಿ ಕೆಲಸ ಮಾಡುವುದು ಸರ್ಕಾರ ಕರ್ತವ್ಯ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು ಸ್ವಾಗತಾರ್ಹ ನಿರ್ಣಯ. ಆದರೆ, ಆರ್ಥಿಕ ಸಂಪನ್ಮೂಲಗಳ ಸಂಗ್ರಹ, ಅಭಿವೃದ್ಧಿ ಹಾಗೂ ನೌಕರರಿಗೆ ಸಂಬಳ ಪಾವತಿಸುವ ಬಗ್ಗೆ ಆಲೋಚನೆ ಮಾಡಬೇಕಿತ್ತು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಶಿರೋಳ ಎಸ್‌ಸಿ ಕಾಲನಿಯಲ್ಲಿ 25.17 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಮೇಲ್ಮಟ್ಟದ ಜಲಾಗಾರ, 4 ಲಕ್ಷ ರೂ. ವೆಚ್ಚದಲ್ಲಿ ಬಿಸಿಎಂ ಹಾಸ್ಟೆಲ್‌ಗೆ ಸೋಲಾರ್ ಅಳವಡಿಕೆ, 1.5 ಲಕ್ಷ ರೂ.ದಲ್ಲಿ ಗ್ರಂಥಾಲಯ ಅಭಿವೃದ್ಧಿ, ಕಪ್ಪಲಿ ಬಸವೇಶ್ವರ ದೇವಸ್ಥಾನ ಹತ್ತಿರ 8 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಮಾಸಿಕ 2 ಸಾವಿರ ರೂ. ಪಾವತಿಸುತ್ತಿರುವ ರಾಜ್ಯ ಸರ್ಕಾರ ಸದ್ದಿಲ್ಲದೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಪರಿಣಾಮ ರಾಜ್ಯದ ಆರ್ಥಿಕತೆ ಸರಿದೂಗಿಸಲು ಮಹಿಳೆಯರ ಪತಿಯ ಜೇಬಿನಿಂದ ಪ್ರತಿ ತಿಂಗಳು ನಾಲ್ಕು ಸಾವಿರ ರೂ. ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ರಾಜ್ಯಕ್ಕೆ ಸಿಎಂ ಆಗಿದ್ದಾರೆ. ಆದರೆ, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ನೀಡಲು ತಾರತಮ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಗತಿಸಿದರೂ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ಪರದಾಡುತ್ತಿದೆ. ಸಿಎಂ ಎಲ್ಲ ಮತಕ್ಷೇತ್ರಗಳ ಅಭಿವೃದ್ಧಿಗೆ ಸರಿಸಮನಾದ ಅನುದಾನ ಹಂಚಿಕೆ ಮಾಡಬೇಕು. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 3 ಉಪ ಚುನಾವಣೆಯಲ್ಲಿ ಗೆದ್ದಿರುವ ಬಗ್ಗೆ ಬೀಗುವುದರಲ್ಲಿ ಯಾವುದೇ ಅರ್ಥವಿಲ್ಲ. ಉಪ ಚುನಾವಣೆಗಳು ಯಾವ ರೀತಿ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ರಾಜ್ಯದ ವಿವಿಧ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ನಾವು ಬಿಜೆಪಿಯಿಂದ 17 ಜನರ ಪೈಕಿ 13 ಜನರನ್ನು ಗೆಲ್ಲಿಸಿದ್ದೇವೆ ಎಂದರು.
ತಾಪಂ ಇಒ ಎಸ್.ಕೆ. ಇನಾಮದಾರ ಮಾತನಾಡಿದರು.