ಯೂರಿಯಾ ಅಸಮರ್ಪಕ ಪೂರೈಕೆಗೆ ಅಸಮಾಧಾನ

CTD GOBBARA---------
Published on

ಚಿತ್ರದುರ್ಗ: ರೈತರು ಯೂರಿಯಾಕ್ಕಾಗಿ ಕ್ಯೂ ನಿಲ್ಲುವುದು ತಪ್ಪಿಲ್ಲ. ಚಿತ್ರದುರ್ಗ ಟಿಎಪಿಸಿಎಂಎಸ್ ಬಳಿ ಗುರುವಾರ ಸಾಕಷ್ಟು ಸಂಖ್ಯೆಯಲ್ಲಿದ್ದ ರೈತರು ಯೂರಿ ಯಾ ಖರೀದಿಸಲು ಹರ ಸಾಹಸ ಪಡಬೇಕಾಯಿತು.

ಮಹಿಳೆಯರು,ಮಕ್ಕಳು, ವೃದ್ಧರೆನ್ನದೆ ಗೊಬ್ಬರ ಸಿಕ್ಕರೆ ಸಾಕೆಂಬ ಧಾವಂತದಲ್ಲಿ ಅನ್ನ, ನೀರು ಬಿಟ್ಟು ಸರತಿಯಲ್ಲಿ ಕಾದು ಗೊಬ್ಬರ ಖರೀದಿಸಿದರು. ಒಂದು ಆಧಾರ್ ಕಾರ್ಡ್‌ಗೆ ಎರಡು ಚೀಲ ಗೊಬ್ಬರ ಕೊಡುತ್ತಿರುವ ಕಾರಣಕ್ಕೆ ಹಲವು ರೈತ ಕುಟುಂಬಗಳು ತಮ್ಮ ಮನೆಯ ಶಾಲಾ, ಕಾಲೇಜು ಓದುವ ಮಕ್ಕಳನ್ನೂ ಕರೆತಂದು ಸರತಿ ಸಾಲಿನಲ್ಲಿ ನಿಲ್ಲಿಸಿ ಗೊಬ್ಬರ ಪಡೆದರು.

ಒಂದು ಆಧಾರ್ ಕಾರ್ಡ್‌ಗೆ ಎರಡು ಚೀಲದಂತೆ ಗೊಬ್ಬರ ವಿತರಿಸಿರುವುದನ್ನು ಟಿಎಪಿಎಂಎಸ್ ಮೂಲಗಳು ಖಚಿತ ಪಡಿಸಿದ್ದು, ಗೊಬ್ಬರ ಪಡೆದವರ ಕೈ ಬೆರಳಿಗೆ ಕೆಂಪುಶಾಹಿ ಹಚ್ಚಲಾಗಿದೆ ಎಂದು ತಿಳಿಸಿವೆ.

ಜಿಲ್ಲೆಯಲ್ಲಿ ಅಂದಾಜು 85 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ಬೆಳೆ ಉಳಿಸಿಕೊಳ್ಳಲು ಗೊಬ್ಬರ ಅನಿವಾರ್ಯವಾಗಿದೆ. ಆದರೆ, ಗೊಬ್ಬರ ಸಿಗುವುದೋ ಇಲ್ಲವೋ ಎಂಬ ಆತಂಕದಲ್ಲಿ ರೈತರಿದ್ದಾರೆ. ಸಕಾಲಕ್ಕೆ ಗೊಬ್ಬರ ವಿತರಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಚಿತ್ರದುರ್ಗ ಟಿಎಂಪಿಸಿಎಂಎಸ್‌ನಲ್ಲಿ 130 ಟನ್ ಸೇರಿ ಜಿಲ್ಲೆಯ ಸೊಸೈಟಿ ಮತ್ತು ಖಾಸಗಿ ಗೊಬ್ಬರ ಅಂಗಡಿಗಳ ಮೂಲಕ 350 ಯೂರಿಯಾ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಂಜುನಾಥ್ ಹೇಳಿದ್ದಾರೆ.

ಜಿಲ್ಲೆಗೆ ಶುಕ್ರವಾರ 86 ಟನ್, ಸೋಮವಾರ 700 ಟನ್ ಹಾಗೂ ಮುಂದಿನ ವಾರಾಂತ್ಯದೊಳಗೆ 1000 ಟನ್ ಯೂರಿಯಾ ಪೂರೈಕೆ ಆಗಲಿದೆ. ಜಿಲ್ಲೆಗೆ ಇನ್ನೂ 2500-3000 ಟನ್ ಯೂರಿಯಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net