

ಪುತ್ತೂರು ಗ್ರಾಮಾಂತರ: ಕೆಯ್ಯೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶುಲ್ಕವನ್ನು ಪಾವತಿಸದಿರುವವರ ನೀರಿನ ಸಂಪರ್ಕ ಕಡಿತಗೊಳಿಸುವ ಕಾರ್ಯಾಚರಣೆ ಗುರುವಾರ ಆರಂಭಗೊಂಡಿತು.
ಗ್ರಾಪಂ ಸಾಮಾನ್ಯ ಸಭೆಯಲ್ಲಿ 10 ಸಾವಿರ ರೂ.ಕ್ಕಿಂತ ಅಧಿಕ ನೀರಿನ ಶುಲ್ಕ ಬಾಕಿ ಇರಿಸಿದವರ ನೀರಿನ ಸಂಪರ್ಕ ಕಡಿತಗೊಳಿಸುವುದೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಗುರುವಾರ ಅಧ್ಯಕ್ಷ ಶರತ್‌ಕುಮಾರ್ ಮಾಡಾವು ಮತ್ತು ಪಿಡಿಒ ನಮಿತಾ ಎ.ಕೆ ನೇತೃತ್ವದಲ್ಲಿ 10 ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ.
ಗ್ರಾ.ಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಜಯಂತಿ ಎಸ್.ಭಂಡಾರಿ, ಬಟ್ಯಪ್ಪ ರೈ ದೇರ್ಲ, ತಾರಾನಾಥ ಕಂಪ, ವಿಜಯಕುಮಾರ್ ಸಣಂಗಳ, ನೆಬಿಸಾ, ಶೇಷಪ್ಪ ದೇರ್ಲ ಇದ್ದರು. ಗ್ರಾ.ಪಂ ಸಿಬ್ಬಂದಿ ಮತ್ತು ಸಂಜೀವಿನಿ ಒಕ್ಕೂಟ ಸದಸ್ಯರು, ಪಂಪ್ ಆಪರೇಟರ್‌ಗಳು ಪಾಲ್ಗೊಂಡಿದ್ದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿರುವ ಫಲಾನುಭವಿಗಳ ಪೈಕಿ 50ಕ್ಕೂ ಅಧಿಕ ಮಂದಿ 10 ಸಾವಿರ ರೂ.ಕ್ಕಿಂತಲೂ ಅಧಿಕ ನೀರಿನ ಶುಲ್ಕವನ್ನು ಪಂಚಾಯಿತಿಗೆ ಪಾವತಿಸಲು ಬಾಕಿ ಇರಿಸಿಕೊಂಡಿದ್ದಾರೆ. ಶುಲ್ಕ ಪಾವತಿಸುವಂತೆ ಈಗಾಗಲೇ 3 ಬಾರಿ ನೋಟೀಸು ನೀಡಲಾಗಿದೆ. ಪ್ರತಿಕ್ರಿಯೆ ನೀಡದಿರುವುದರಿಂದ ಕ್ರಮಕೈಗೊಳ್ಳಲಾಗಿದೆ. ವಿದ್ಯುತ್ ಬಿಲ್ ಪಾವತಿ, ಪಂಪ್‌ಗಳ ದುರಸ್ತಿ, ಪೈಪ್‌ಲೈನ್ ದುರಸ್ತಿ ಸೇರಿದಂತೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗಾಗಿ ಬಹಳಷ್ಟು ಹಣ ಖರ್ಚಾಗುತ್ತಿರುವುದರಿಂದ ಕಠಿಣ ಕ್ರಮ ಅನಿವಾರ್ಯ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಮಾಡಾವು ತಿಳಿಸಿದ್ದಾರೆ.