ಗ್ರಾಮಸಭೆಯಲ್ಲಿ ಸಮಸ್ಯೆಗಳ ಅನಾವರಣ

Disclosure of problems in Gram Sabha
Published on

ಸುಂಟಿಕೊಪ್ಪ:

ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿ ಇದ್ದು ಕೃಷಿಕರು ಹಾಗೂ ಜನವಸತಿಗೆ ತೊಂದರೆಯಾಗುತ್ತಿದ್ದರೂ ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೊಂಡೂರು ಗ್ರಾಮಸ್ಥರು ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದರು. ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ. ಜೋಸೆಫ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತೊಂಡೂರಿನ ನಿವಾಸಿಗಳು, ಅರಣ್ಯದಂನಲ್ಲಿ ಜನವಸತಿ ಇದೆ. ನಮಗೆ ಸೂಕ್ತ ಬೀದಿ ದೀಪಗಳಿಲ್ಲ. ಅರಣ್ಯ ವ್ಯಾಪ್ತಿಯ ರಸ್ತೆಯ ಬದಿಗಳಲ್ಲಿ ಬೆಳೆದಿರುವ ಕಾಡುಗಿಡಗಳನ್ನು ಕಡಿದು ರಸ್ತೆ ಬದಿಯನ್ನು ಸುಸ್ಥಿತಿಯಲ್ಲಿ ಇಡದ ಕಾರಣ ಕಾಡಾನೆಗಳು ಎದುರು ಬಂದರೂ ಕಾಣುವುದಿಲ್ಲ. ಇದರಿಂದ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಸ್ಪಂದಿಸಿದ ಜೋಸೆಫ್ ಕಾಡಾನೆಗಳ ನಿಗ್ರಹಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿ ಸಮಸ್ಯೆ ಬಗೆಹರಿಸಲಾಗುವುದು. ಕೂಡಲೇ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅರಣ್ಯ ದಂಚಿನ ರಸ್ತೆ ಬದಿಯಲ್ಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗುವುದು ಎಂದರು. ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಹೋಂ ಸ್ಟೇಗಳು, ರೆಸಾರ್ಟ್‌ಗಳು ಹಾಗೂ ಪ್ರವಾಸಿ ತಾಣಗಳಿಂದಾಗಿ ಗ್ರಾಮಗಳು ಕಸದ ತೊಟ್ಟಿಗಳಾಗುತ್ತಿವೆ ಎಂದು ತೊಂಡೂರು ಗ್ರಾಮದ ಕೆ.ಎನ್. ಸಂತೋಷ್, ರೇಖಾ, ರಶ್ಮಿ ಮೊದಲಾದವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಭೀಕರ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು ಈ ಸಮಸ್ಯೆಯ ಪರಿಹಾರಕ್ಕೆ ಶೀಘ್ರದಲ್ಲೇ ಸೂಕ್ತ ಪರಿಹಾರ ಹುಡುಕುವುದಾಗಿ ಅಧ್ಯಕ್ಷರು ಹೇಳಿದರು. ಕೆರೆ ಒತ್ತುವರಿ ಬಗ್ಗೆ ದೂರು ಕೇಳಿಬಂದಾಗ, ಪಂಚಾಯಿತಿ ವ್ಯಾಪ್ತಿಯಲ್ಲಿನ ಒತ್ತುವರಿಯಾಗಿರುವ ಕೆರೆಗಳೂ ಸೇರಿದಂತೆ ಎಲ್ಲಾ ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿದಾರರಿಂದ ತೆರವುಗೊಳಿಸಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದು ಅಧ್ಯಕ್ಷ ಜೋಸೆಫ್ ತಿಳಿಸಿದರು.

ರಸ್ತೆ ಕಾಮಗಾರಿಗೆಂದು ಮೀಸಲಿರಿಸಿದ್ದ ಅನುದಾನವನ್ನು ಹಿಂಪಡೆದಿರುವ ಬಗ್ಗೆ ಸದಸ್ಯ ರಮೇಶ್ ಸಭೆಯಲ್ಲಿದ್ದ ಪಂಚಾಯತ್ ರಾಜ್ ಇಲಾಖೆಯ ಅಭಿಯಂತರ ಫಯಾಜ್ ಅವರನ್ನು ಪ್ರಶ್ನಿಸಿದಾಗ, ಅದು ನಮ್ಮ ಇಲಾಖೆಯ ಅನುದಾನವಲ್ಲ. ಯಾವ ಇಲಾಖೆಯ ಅನುದಾನ ಎಂದು ಖಚಿತ ಪಡಿಸಿಕೊಳ್ಳಿ ಎಂದರು. ತೊಂಡೂರು ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಕ್ಕೆ ತಡೆ ಗೋಡೆ ಇಲ್ಲ. ಹೀಗಾಗಿ ಇಲ್ಲಿನ ಮಕ್ಕಳು ನೇರವಾಗಿ ರಸ್ತೆಗೆ ಓಡಿ ಬರುವ ಅಪಾಯವಿದೆ. ಕೂಡಲೇ ತಡೆಗೋಡೆ ನಿರ್ಮಿಸಿ ಎಂದು ಶ್ರೀಜಾ ಎಂಬವರು ಆಗ್ರಹಿಸಿದರು.

ನೆರೆಯ ಕೇರಳ ರಾಜ್ಯದಲ್ಲಿ ಮಾರಕ ಕರೋನಾ ಅಪಾಯ ಸೃಷ್ಟಿಯಾಗುತ್ತಿದೆ. ಹಾಗಾಗಿ ಕೊಡಗಿನಿಂದ ಶಬರಮಲೆಗೆ ಯಾತ್ರೆ ತೆರಳಿ ಮರಳುವವರನ್ನು ತಪಾಸಣೆಗೆ ಒಳಪಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಬೇಕಿದೆ ಎಂದು ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ಸಭೆಯ ನೋಡಲ್ ಅಧಿಕಾರಿಯಾಗಿ ಸೋಮಯ್ಯ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ. ಹಾಗೆಯೇ ಪಂಚಾಯಿತಿಯ ಎಲ್ಲಾ ಸದಸ್ಯರ ಸಹಭಾಗಿತ್ವದಲ್ಲಿ ಸರ್ಕಾರದಿಂದ ದೊರಕುವ ಅನುದಾನಗಳನ್ನು ಬಳಸಿಕೊಂಡು ಆದ್ಯತೆಯ ಮೇಲಿನ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯಶ್ರೀ , ಸಿದ್ದಿಕ್, ಮಧುಸೂದನ್, ಕಮಲ, ಸಿಂಧೂ, ವೇದಾವತಿ, ಚಂದ್ರಾವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net