

ಗುತ್ತಲ: ಆಸ್ಪತ್ರೆಯಲ್ಲಿ ಔಷಧ ಇಲ್ಲ... ರಾತ್ರಿ ವೇಳೆ ವೈದ್ಯರು ಲಭ್ಯರಿರುವುದಿಲ್ಲ... ಕಾನೂನು ಉಲ್ಲಂಘಿಸಿ ಬಾರ್ಗಳನ್ನು ತೆರೆಯಲಾಗಿದೆ... ಸ್ವಚ್ಛತೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ...
ಇಲ್ಲಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಹೀಗೆ ದೂರು ದುಮ್ಮಾನಗಳು ಮಂಡನೆಯಾದವು. ಎಲ್ಲಕ್ಕೂ ಭರವಸೆಗಳೂ ಸಿಕ್ಕವು. ಆದರೆ, ಕಾಲಮಿತಿಯ ಮಾತು ಅಷ್ಟಾಗಿ ಕೇಳಿಬರಲಿಲ್ಲ.
ಪಶು ಆಸ್ಪತ್ರೆಯಲ್ಲಿ ಔಷಧಗಳನ್ನು ಕೊಡದೆ ಖಾಸಗಿ ಅಂಗಡಿಯಲ್ಲಿ ತೆಗೆದುಕೊಳ್ಳಿ ಎಂದು ಚೀಟಿ ಬರೆದು ಕೊಡುತ್ತಿದ್ದಾರೆ ಎಂದು ಸದಸ್ಯ ಭರಮಪ್ಪ ಹಾದಿಮನಿ ಪಶು ವೈದ್ಯರ ಎದುರು ಆರೋಪಿಸಿದರು.
ಪಶು ವೈದ್ಯರ ಕಾರ್ಯವೈಖರಿ ಸರಿಯಲ್ಲ. ಅವ್ಯವಸ್ಥೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷ-ಕಿರಣ ತಜ್ಞರಿಲ್ಲ, ಯಂತ್ರವಿದ್ದರೂ ಪ್ರಯೋಜನಕ್ಕಿಲ್ಲ ಎಂದು ಮಾಲತೇಶ ಶೀತಾಳ ದೂರಿದರು. ವೈದ್ಯರು ಸರಿಯಾಗಿ ಔಷಧ ನೀಡುವುದಿಲ್ಲ. ರಾತ್ರಿ ವೇಳೆ ವೈದ್ಯರು ಲಭ್ಯರಿರುವುದಿಲ್ಲ ಎಂದು ಸದಸ್ಯರು ದೂರಿದರು. ಸಮುದಾಯ ಆರೋಗ್ಯ ಕೇಂದ್ರ ಡಾ. ವಿನಯ ಕವಳಾಸ್ತ್ರಹಿರೇಮಠ ಹಾಗೂ. ಸುರೇಶ ಮೈಲಾಳ ಮಾತನಾಡಿ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಕರೆಂಟ್ ಕಟ್ ಮಾಡಿದರೆ ಜನರಿಗೆ ಅನನುಕೂಲವಾಗುತ್ತದೆ. ಬೋರ್ವೆಲ್ ಮೋಟಾರ್ಗಳು ಸುಡುತ್ತಿವೆ ಎಂದು ಅಜ್ಜಯ್ಯ ಬಂಡಿವಡ್ಡರ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮುಲ್ಲಾ ಮೆಹಬೂಬ ಅವರಿಗೆ ದೂರಿದರು.
ಪಟ್ಟಣ ಬಸ್ ನಿಲ್ದಾಣದ ಬಳಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸದಸ್ಯರು ಸಹಕರಿಸಬೇಕು ಎಂದು ಎಎಸ್ಐ ಎಸ್.ಎಂ. ಸಾಸರವಾಡ ಸಭೆಗೆ ತಿಳಿಸಿದರು.
ನಾಗರತ್ನ ಬಡಿಗೇರ, ಪರಶುರಾಮ ಯಲಗಚ್ಚ ಹಾಗೂ ಎಸ್.ಜಿ. ಹೊನ್ನಪ್ಪನವರ ಮಾತನಾಡಿ, ಶಾಲೆ ಬಳಿ ಇರುವ ಕಾನೂನು ಉಲ್ಲಂಘಿಸಿರುವ ಬಾರ್ಗಳನ್ನು ಸ್ಥಳಾಂತರಿಸಬೇಕು, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಡಮನಿ ಅವರನ್ನು ಒತ್ತಾಯಿಸಿದರು.
ಪಪಂ ಅಧ್ಯಕ್ಷೆ ಮಾಳವ್ವ ಗೊರವರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಹ್ಮದಹನೀಫ್ ರಿತ್ತಿ, ಖಲೀಲಹ್ಮದ್ ಖಾಜಿ, ಬಸಣ್ಣ ನೆಗಳೂರ, ವಿಜಯ ಲಮಾಣಿ, ಪಾರವ್ವ ಲಮಾಣಿ, ರೇಖಾ ಲಮಾಣಿ, ಶಕುಂತಲಾ ಗುತ್ತಲ, ಸಾವಿತ್ರಿ ಘಂಟಿ, ಗಣೇಶ ಅರೇಮಲ್ಲಾಪುರ, ಇತರರಿದ್ದರು.
ಸ್ಥಾಯಿ ಸಮಿತಿಗೆ ಆಯ್ಕೆ
ನೂತನ ಪಪಂ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ 4ನೇ ವಾರ್ಡ್ನ ಸದಸ್ಯ ಪ್ರದೀಪ ಸಾಲಗೇರಿ ಅವರನ್ನು ಆಯ್ಕೆ ಮಾಡಲಾಯಿತು.