ಇಳಕಲ್ಲದಲ್ಲಿ ಶಿಸ್ತುಬದ್ಧ ಪಥಸಂಚಲನ

Disciplined traffic in Ilakalla
ಇಳಕಲ್ಲ ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣಧಾರಿಗಳ ಪಥ ಸಂಚಲನ ನಡೆಯಿತು.
Published on

ಇಳಕಲ್ಲ(ಗ್ರಾ): ನಗರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳ ಪಥಸಂಚಲನ ಜನತೆಯಲ್ಲಿ ರಾಷ್ಟ್ರಭಕ್ತಿ ಉಕ್ಕಿಸಿತು.

ಗೌಳೇರಗುಡಿಯ ರಾಮಕೃಷ್ಣ ವನದಿಂದ ಆರಂಭವಾದ ಒಂದು ಬಣ ಪೊಲೀಸ್ ಬಯಲು ಮಾರ್ಗವಾಗಿ ಹೊರಟರೆ ಇನ್ನೊಂದು ಬಣ ಹಳೆಯ ಸರ್ಕಾರಿ ಆಸ್ಪತ್ರೆ ಮಾರ್ಗವಾಗಿ ಹೊರಟವು.

ಎರಡೂ ಕಡೆಗಳಿಂದ ಆಗಮಿಸುತ್ತಿದ್ದ ಗಣವೇಷಧಾರಿಗಳ ಮೇಲೆ ಪುಷ್ಪ ಹಾರಿಸಿ ಜನತೆ ಸ್ವಾಗತಿಸಿಕೊಂಡರು. ಶಿಸ್ತುಬದ್ಧವಾಗಿ ಹೊರಟ ಪಥಸಂಚಲನದ ದೃಶ್ಯವನ್ನು ಜನತೆ ಕಣ್ತುಂಬಿಕೊಂಡರು.

ಪಥಸಂಚಲನ ಮಾರ್ಗದಲ್ಲಿ ಮಹಿಳೆಯರು ನೀರು ಹಾಕಿ ರಂಗೋಲಿ ಬಿಡಿಸಿದ್ದರು. ನಗರದ ಹಲವಾರು ಆಯಕಟ್ಟಿನ ಸ್ಥಳಗಳಲ್ಲಿ ದೇಶಭಕ್ತರ ವೇಷಭೂಷಣಗಳನ್ನು ಮಕ್ಕಳಿಗೆ ತೊಡಿಸಿ ಅವರಿಂದ ಗಣ ವೇಷಧಾರಿಗಳನ್ನು ಸ್ವಾಗತಿಸಿಕೊಳ್ಳುವ ದೃಶ್ಯ ಕಂಡು ಬಂದಿತು. ಗೌಳೇರಗುಡಿಯ ರಾಮಕೃಷ್ಣ ವನದಿಂದ ಹೊರಟ ಎರಡು ಪ್ರತ್ಯೇಕ ಬಣಗಳು ಎಸ್.ಆರ್. ಕಂಠಿ ವೃತ್ತದಲ್ಲಿ ಸೇರಿದ ದೃಶ್ಯ ಜನಾಕರ್ಷಿಸಿತು.

ಎರಡೂ ಬಣಗಳು ವೀರಮಣಿ ಕ್ರೀಡಾಂಗಣ ಸೇರಿದ ಬಳಿಕ ಅಲ್ಲಿ ಕವಾಯತುಗಳನ್ನು ಮಾಡಿದರು. 80 ವರ್ಷದ ಹಿರಿಯರಿಂದ ಹಿಡಿದು ಆರು ವರ್ಷದ ಮಕ್ಕಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಈ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಂದಾಜು 400 ಪೊಲೀಸರು ಬಿಗಿ ಬಂದೋಸ್ತ್‌ನಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net