

ಸಿರಿಗೇರಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ನಡೆಯಿತು.
ಜೆಎಚ್‌ವಿ ಸಂಸ್ಥೆ ಕಾರ್ಯದರ್ಶಿ ಜೆ.ದೊಡ್ಡನಗೌಡ್ರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತೋಷದ ವಿಷಯ. ಮಕ್ಕಳ ಸರ್ವತೋಮುಖ ವಿಕಸನಕ್ಕೆ ಮುಖ್ಯ ಕಾರಣ ಪ್ರಾಥಮಿಕ ಶಾಲಾ ಹಂತವಾಗಿದೆ. ಶಿಸ್ತು, ಸಂಯಮ, ಪ್ರಾಮಾಣಿಕತೆಯ ಕಲಿಕೆ ಇಲ್ಲಿ ಸಿಗುತ್ತದೆ ಎಂದರು.
ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸುಮಂಗಳ ಮೇಟಿ ಮಾತನಾಡಿ, ಶಿಕ್ಷಕನ ಕೌಟುಂಬಿಕ ಜೀವನದಲ್ಲಿ ಅಡೆತಡೆಗಳಿದ್ದರೂ ಒತ್ತಡದ ನಡುವೆಯೂ ಮಕ್ಕಳ ಶಿಕ್ಷಣ ಒತ್ತು ನೀಡುತ್ತಾರೆ. ಒಬ್ಬ ಶಿಲ್ಪ ಕಲಾವಿದ ಕಲ್ಲನ್ನು ಕಟೆದು ಮೂರ್ತಿ ಮಾಡುವಂತೆ ಮಕ್ಕಳಿಗೆ ಶಿಕ್ಷಣ ನೀಡಿ ಪ್ರತಿಭಾವಂತರನ್ನಾಗಿ ಮಾಡುತ್ತಾರೆ. ಅಂತಹ ಗುರುಗಳ ತ್ಯಾಗವನ್ನು ಮರೆಯದೆ ಅವರ ಮಾರ್ಗದರ್ಶನವನ್ನು ಪಾಲಿಸಬೇಕು ಎಂದರು.
ಮುಖ್ಯ ಶಿಕ್ಷಕ ಗೋವಿಂದರಾಜು, ಎಸ್ ಡಿ ಎಂ ಸಿ ಅಧ್ಯಕ್ಷ ಬಿ ನಾಗರಾಜ, ಅನ್ನ ದಾಸೋಹದ ಸಹಾಯಕ ನಿರ್ದೇಶಕ ರಾಮ್ ಮೋಹನ್ ಬಾಬು, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಸಿ ಆರ್ ಪಿ. ಎ.ಅರುಣ ಕುಮಾರ್, ಸರ್ಕಾರಿ ನೌಕರರ ಸಂಘದ ಎಚ್. ದುರುಗಪ್ಪ, ಪ್ರಮುಖರಾದ ಕಟ್ಟೇಗೌಡ ಬಿ ಮಲ್ಲಯ್ಯ, ಎಸ್ ಎಂ ಅಡಿವೆಯ ಸ್ವಾಮಿ, ಆಟೋ ತಿಮ್ಮಯ್ಯ ಇತರರಿದ್ದರು.