ಹಣ ಸಂಗ್ರಹಿಸಿದರೆ ಶಿಸ್ತುಕ್ರಮ

9 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ವಿತರಣೆಗೆ ಸಂಬಂಧಿಸಿ ಪಾಲಕರು, ಪೋಷಕರಿಂದ ಬೇರೆ ರೀತಿಯ ಹಣ ಸಂಗ್ರಹಕ್ಕೆ ಮುಂದಾದರೆ ಇಲಾಖಾ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಲಾ ಮಕ್ಕಳಿಗೆ ವಿತರಣೆ ಮಾಡುವ ಮೊಟ್ಟೆ ಅಥವಾ ಬಾಳೆಹಣ್ಣು ಇಲ್ಲವೆ ಶೇಂಗಾ ಚಿಕ್ಕಿ ಖರೀದಿಸುವಾಗ ಸರ್ಕಾರಿ ಪ್ರತಿ ವಿದ್ಯಾರ್ಥಿಗೆ ನಿಗದಿಗೊಳಿಸಿರುವ 6 ರೂ. ದರದ ಮಿತಿಯೊಳಗೇ ವೆಚ್ಚವನ್ನು ಭರಿಸುವಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಯೋಜಿಸಬೇಕು. ಯಾವುದೇ ಕಾರಣಕ್ಕೂ ಶಾಲಾ ಮಕ್ಕಳಿಂದ ಹಣ ವಸೂಲಿ ಮಾಡಲು ಇಲಾಖಾ ನಿಯಮಾವಳಿಯಲ್ಲಿ ಅವಕಾಶವಿಲ್ಲ.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಹೆಚ್ಚುವರಿ ಹಣ ಸಂಗ್ರಹಿಸಿದ ಬಗ್ಗೆ ಲಿಖಿತ ದೂರುಗಳು ಬಂದರೆ ಇಲಾಖಾ ವಿಚಾರಣೆ ನಡೆಸಲಾಗುತ್ತಿದ್ದು, ಅದು ನಿಜಾಂಶಗಳಿಂದ ಸಾಬೀತಾದಲ್ಲಿ ಶಾಲಾ ಮುಖ್ಯ ಶಿಕ್ಷಕರು ಇಲ್ಲವೆ ಸಹ ಶಿಕ್ಷಕರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ಬಿಇಒ ಹಾಗೂ ಡಿಡಿಪಿಐ ಅವರು ತಮ್ಮ ವ್ಯಾಪ್ತಿಯಲ್ಲಿಯ ಶಾಲೆಗಳಿಗೆ ಭೇಟಿ ನೀಡಿ ವೆಚ್ಚವನ್ನು ಭರಿಸಿದ ಬಗ್ಗೆ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿಶೇಷ ಗಮನ ನೀಡಿ ತಪಾಸಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಯಶ್ರೀ ಶಿಂತ್ರಿ ನಿರ್ದೇಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net