

ಬಾಳೆಹೊನ್ನೂರು: ಕ್ರೀಡೆಯಿಂದ ವಿದ್ಯಾರ್ಥಿಗಳು ಶಿಸ್ತು, ಸಂಯಮ ಕಲಿಯಲು ಸಾಧ್ಯ ಎಂದು ಎಸ್‌ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಭೂದೇಶ ಹೇಳಿದರು.
ಕಲಾರಂಗ ಕ್ರೀಡಾಂಗಣದಲ್ಲಿ ಎಸ್‌ಜೆಆರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ಮೂಡಿಸಲು ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ತೊಡಗಿಕೊಂಡರೆ ಶಿಕ್ಷಣದೊಂದಿಗೆ, ಕ್ರೀಡೆಯಲ್ಲಿಯೂ ಸಾಧನೆ ಮಾಡಬಹುದು. ಕ್ರೀಡೆಯಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯವಾಗಲಿದೆ ಎಂದರು.
ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜ್ ಭಟ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದಿನೊಂದಿಗೆ ಕ್ರೀಡೆಯಲ್ಲಿಯೂ ನಿರಂತರ ಪರಿಶ್ರಮ, ಸಾಧನೆ ಮಾಡಿದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗಲಿದೆ. ಎಸ್‌ಜೆಆರ್ ಕಾಲೇಜಿನ ವಿದ್ಯಾರ್ಥಿ ಸಾಲೀಮ್ ಹ್ಯಾಮರ್ ಥ್ರೋ ಕ್ರೀಡೆಯಲ್ಲಿ ನಿರಂತರವಾಗಿ ಅಭ್ಯಾಸ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ಸ್ವಲ್ಪ ಸಮಯ ಕ್ರೀಡೆಯಲ್ಲಿ ತೊಡಗಿಕೊಂಡು ತಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬೇಕು ಎಂದರು.
ಎಸ್‌ಜೆಆರ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇಂಚರ ಗ್ಲಾಡಿಯೇಟರ್ಸ್, ಅರ್ಪಿತ ಅವೆಂಜರ್ಸ್, ಯೂತ್ ಬಾಯ್ಸ, ಗುರುಸ್ಟಾರ್, ಯಂಗ್ ಸ್ಟಾರ್ ಹಾಗೂ ರಾಕ್‌ಸ್ಟಾರ್ ಎಂಬ ತಂಡಗಳನ್ನು ರಚಿಸಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಇಂಚರ, ಪ್ರಸನ್ನ, ಪ್ರಶಾಂತ್‌ಕುಮಾರ್, ಅರವಿಂದ್, ನಟರಾಜನಾಯಕ್, ಉಮಾಶಂಕರ್, ಜೆರ‌್ರಿ ಜೇಮ್ಸ್ ಮತ್ತಿತರರು ಇದ್ದರು.