

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ಸಂಯಮ ರೂಢಿಸಿಕೊಳ್ಳಬೇಕು. ಮಾನಸಿಕ ಸ್ಥಿರತೆ ಮತ್ತು ವ್ಯಕ್ತಿತ್ವದ ಸರ್ವೋತೋಮುಖ ಪ್ರಗತಿಗೆ ಹಿರಿಯ ಮಾರ್ಗದರ್ಶನ ಪಡೆಯಬೇಕು. ಅದರಲ್ಲೂ ಪಾಲಕರ ಆಜ್ಞೆ ಮೀರಬಾರದು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಸಿ ಇದ್ದಾಗ ಅದರ ಪ್ರಭಾವ ಕಾಣುವುದಿಲ್ಲ. ಬೆಳೆದು ದೊಡ್ಡವರಾಗುತ್ತಿದ್ದಂತೆ ಮೌಲ್ಯದ ಪ್ರಭಾವ ಊರ್ಧ್ವಮುಖಗೊಳ್ಳುತ್ತದೆ ಎಂದರು.
ಪಿಎಚ್‌ಡಿ ಪಡೆದಿರುವ ಡಾ.ನಿತಿನ ಎಸ್.ಎನ್., ಡಾ. ನೇತ್ರಾವತಿ ಗಬ್ಬೂರ, ಡಾ. ಗುಣಿತ ಎನ್.ಎಸ್., ಡಾ.ಸೌಮ್ಯಶ್ರೀ ಹೆಗಡೆ, ಕೆಸೆಟ್ ತೇರ್ಗಡೆಯಾಗಿರುವ ಪ್ರೊ. ಪೂಜಾ ನಲವಡಿ, ಪ್ರೊ. ಬಸವರಾಜ ತಳವಾರ, ಎಂ.ಕಾಂ ವಿದ್ಯಾರ್ಥಿನಿ ಬೀಬಿ ಆಯೇಷಾ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಡಾ. ನೇತ್ರಾವತಿ ಗಬ್ಬೂರ ಕಾಲೇಜ್ ಒಕ್ಕೂಟದ ವರದಿ ಓದಿದರು. ಪ್ರೊ.ಬಿ.ಎಸ್. ಪಾಟೀಲ ಕ್ರೀಡಾ ಚಟುವಟಿಕೆಗಳ ವರದಿ ಓದಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಶಿವಪ್ಪ ಹಂಗರಕಿ, ಐಕ್ಯೂಎಸಿ ಸಂಯೋಜಕಿ ಡಾ. ಗೀತಾ ಕರಾಡೆ ಉಪಸ್ಥಿತರಿದ್ದರು.
ಸಮನ್ವಿತ ಮಠದ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಡಿ.ಕೆ. ವಾಗ್ಮೋಡೆ ಸ್ವಾಗತಿಸಿದರು. ಡಾ. ಸೌಮ್ಯಾ ಸಜ್ಜನ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ನಾಗಯ್ಯ ಹಿರೇಮಠ ವಂದಿಸಿದರು. ಪ್ರೊ. ಪೂಜಾ ನಲವಡಿ ನಿರೂಪಿಸಿದರು.