ಬಾಲ್ಯವಿವಾಹ ಕಂಡುಬಂದರೆ ಶಿಸ್ತುಕ್ರಮ: ಜಿಪಂ ಸಿಇಒ

12 Jaggu 6
Published on

ಬೆಳಗಾವಿ: ಬಾಲ್ಯವಿವಾಹಮುಕ್ತ ಜಿಲ್ಲೆಯಾಗಿಸಲು ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಬಾಲ್ಯವಿವಾಹ ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜವಾಬ್ದಾರಿ ಬಹುಮುಖ್ಯವಾಗಿದೆ ಎಂದು ಜಿಪಂ ಸಿಇಒ ರಾಹುಲ್​ ಶಿಂಧೆ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ್ಯ ವಿವಾಹ ತಡೆಗೆ ಸಂಬಂಧಿಸಿದ ಇಲಾಖೆಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ಜರುಗಿರುವ ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತುಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಿಳಾ ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರು ಮತ್ತು ಮಕ್ಕಳ ಸಾಗಣೆಗೆ ಕಡಿವಾಣ ಹಾಕಬೇಕೆಂದು ಸೂಚಿಸಿದರು.

ಸ್ವಾಧಾರ ಗೃಹಗಳಲ್ಲಿ ದಾಖಾಲಾಗಿರುವ ನಿವಾಸಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಪುನರ್ವಸತಿ ನೀಡಬೇಕು. ಈ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು. ಚಿಕ್ಕೋಡಿಯಲ್ಲಿ ಪ್ರಾರಂಭಾವಗಿರುವ ಸಖಿ ಒನ್​ ಟಕದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ವ್ಯಾಪಕ ಪ್ರಚಾರ ಮಾಡಿ ಜಾಗೃತಿ ಮೂಡಿಸಲು ತಿಳಿಸಿದರು. ಜಿಲ್ಲೆಯಲ್ಲಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳ ಕುರಿತು ಪ್ರಚಾರ ಕೈಗೊಳ್ಳಬೇಕು. ಸಿಶಕ್ತಿ ಗುಂಪುಗಳಿಗಾಗಿ ಸವಿರುಚಿ ಕ್ಯಾಂಟೀನ್​ ಪ್ರಾರಂಭಿಸಲು ಒದಗಿಸಲಾದ ವಾಹನಗಳ ಮಾಹಿತಿ ಪಡೆಯಬೇಕು. ಎಲ್ಲ ಇಲಾಖೆಗಳಲ್ಲಿ ಸಮಿತಿ ರಚಿಸಿರುವ ಕುರಿತು 15 ದಿನದೊಳಗೆ ವರದಿ ನೀಡಬೇಕೆಂದು ಸೂಚಿಸಿದರು.

ಗೃಹಲಕ್ಷಿ$್ಮ ಫಲಾನುಭವಿಗಳನ್ನು ಪಿ.ಎಂ.ಜೆ.ಜೆ.ಬಿ.ವೈ ಹಾಗೂ ಪಿ.ಎಂ.ಎಸ್​.ಪಿ.ವೈ ಯೋಜನೆಗಳ ಸೌಲಭ್ಯದ ಸದುಪಯೋಗ ಪಡೆಯುವಂತೆ ಕ್ರಮವಹಿಸಲು ಸೂಚಿಸಿದರು. ಇಲಾಖೆ ಉಪನಿರ್ದೇಶಕ ಆರ್​.ನಾಗರಾಜ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಶ್ರುತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡಾದಿ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net