

ಕೊಪ್ಪ: ಪಪಂ ನೆಲಬಾಡಿಗೆ ಮಳಿಗೆಯನ್ನು ಒಳ ಬಾಡಿಗೆ ಆಧಾರದಲ್ಲಿ ಬೇರೆಯವರು ನಡೆಸುತ್ತಿದ್ದರೆ ಸರ್ವೇ ನಡೆಸಿ ಅವುಗಳನ್ನು ಪಟ್ಟಣ ಪಂಚಾಯಿತಿ ಸುಪರ್ದಿಗೆ ಪಡೆಯಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್(ಇದಿನಬ್ಬ) ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆಲಬಾಡಿಗೆ ಮಳಿಗೆ ಮೂಲ ಖಾತೆದಾರರು ಬೇರೆ ವ್ಯಕ್ತಿಯಿಂದ ದುಪ್ಪಟ್ಟು ಹಣ ಪಡೆದು ಮಳಿಗೆಯನ್ನು ಅವರಿಗೆ ನೀಡುತ್ತಿದ್ದಾರೆ. ಇದರಿಂದ ಪಂಚಾಯಿತಿಗೆ ಆರ್ಥಿಕ ನಷ್ಟವಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದರು.
ಪಂಚಾಯಿತಿ ಆಸ್ತಿಗೆ ಇನ್ನೊಬ್ಬರು ಅಗ್ರಿಮೆಂಟ್ ಪತ್ರ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಸ್ಮಾಯಿಲ್ ಅವರು, ಮಳಿಗೆ ಪಡೆದ ವ್ಯಕ್ತಿ ಮೃತಪಟ್ಟಿದ್ದರೆ, ಕುಟುಂಬದವರು ಪಂಚಾಯಿತಿಗೆ ಮರಣ ಪ್ರಮಾಣ ಪತ್ರ ನೀಡಿ ಅನುಮತಿ ಪಡೆಯಬೇಕು. ಇಲ್ಲವಾದರೆ ಪಂಚಾಯಿತಿ ಸುಪರ್ದಿಗೆ ಪಡೆದು ಅರ್ಹರಿಗೆ ನೀಡಲಾಗುವುದು ಎಂದರು.
ಮುಖ್ಯಾಧಿಕಾರಿ ಚಂದ್ರಕಾಂತ್ ಮಾತನಾಡಿ, ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಸಂಪೂರ್ಣ ಜಾರಿಯಾಗಬೇಕು. ಈ ಹಿಂದೆ ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರು ಇಲ್ಲದಿದ್ದಾಗ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿತ್ತು. ಆಗ ಕೆಲವರಿಂದ ಒತ್ತಡ ಬಂದಿತ್ತು. ತಿಂಗಳಿಗೆ ಎರಡು ಬಾರಿ ಅನಿರೀಕ್ಷಿತವಾಗಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ದಂಡ ಹಾಕುವ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮೊದಲು ಮೈಕ್‌ನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಪಂಚಾಯಿತಿ ಸದಸ್ಯರಾದ ಎಚ್.ಆರ್.ರೇಖಾ, ಸುಜಾತಾ, ಹೇಮಾವತಿ, ಎಂಜಿನಿಯರ್ ರಾಜೇಶ್ ಇದ್ದರು.