ಇ- ಸ್ವತ್ತು ವಿತರಿಸದಿದ್ದರೆ ಶಿಸ್ತು ಕ್ರಮ

ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಪಂ ಸಿಇಒ ಕೆ.ಅರ್.ನಂದಿನಿ ಭೇಟಿ ನೀಡಿದರು.
ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಪಂ ಸಿಇಒ ಕೆ.ಅರ್.ನಂದಿನಿ ಭೇಟಿ ನೀಡಿದರು.
Published on

ಶ್ರೀರಂಗಪಟ್ಟಣ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಬುಧವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಚೇರಿಗಳಲ್ಲಿ ಸ್ವಚ್ಛತೆ ಕಪಾಡಬೇಕು. ಸಂಜೆಯೊಳಗೆ ಕಚೇರಿಯ ಒಳಗೆ ಮತ್ತು ಹೊರಗಿನ ವಾತಾವರಣ ಸಂಪೂರ್ಣ ಬದಲಾಗಬೇಕು. ಸಾರ್ವಜನಿಕ ಕೆಲಸಗಳು ಯಾವುದೇ ತೊಂದರೆ ಇಲ್ಲದಂತೆ ಸುಲಲಿತವಾಗಿ ಆಗಬೇಕು. ಈ ಬಗ್ಗೆ ನೀವು ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.

ಸಕಾಲದಲ್ಲಿ ಸ್ವೀಕೃತಗೊಂಡ ಅರ್ಜಿಯನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡದೇ ಬೇಜವಾಬ್ದಾರಿ ತೋರಿದ ಮೇಳಾಪುರ, ತಡಗವಾಡಿ, ಹುಲಿಕೆರೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡುವಂತೆ ಇಒ ವೇಣು ಅವರಿಗೆ ಸೂಚನೆ ನೀಡಿದರು. 45 ದಿನಗಳೂಳಗಾಗಿ ಅರ್ಜಿಗಳನ್ನು ವಿಲೇವಾರಿ ಮಾಡದಿರುವ ಪಿಡಿಒಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲು ತಿಳಿಸಿದರು.

ಕೆ.ಶೆಟ್ಟಿಹಳ್ಳಿ ಗ್ರಾಪಂನಲ್ಲೂ ವಿವಿಧ ಯೋಜನೆಗಳಡಿ ನಿರೀಕ್ಷಿತ ಪ್ರಗತಿ ಆಗದಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಉತ್ತಮ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಕೆ.ಶೆಟ್ಟಹಳ್ಳಿ, ಕಿರಂಗೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಿಇಒ, ಇ-ಸ್ವತ್ತು, ಸಕಾಲ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸಬೇಕು. ಅಲ್ಲದೆ, ಗ್ರಾಪಂನಲ್ಲಿರುವ ಪಿಡಿಒ ಸೇರಿದಂತೆ ಎಲ್ಲ ಸಿಬ್ಬಂದಿ ಮಾಹಿತಿ, ಕುಡಿಯುವ ನೀರಿನ ಸ್ಥಾವರ, ನಲ್ಲಿಗಳು, ಕಿರು ನೀರು ಸರಬರಾಜು ಘಟಕಗಳು, ಬೋರ್ವೆಲ್ ಸಂಖ್ಯೆಯನ್ನು ಗೋಡೆಯ ಮೇಲೆ ಬರೆಸಬೇಕು. ನೀರು, ನೈರ್ಮಲ್ಯ ಸೇರಿದಂತೆ ಇತರ ಯೋಜನೆಗಳ ಕುಂದುಕೊರತೆಗಳ ಕುರಿತು ದೂರು ಸಲ್ಲಿಸಲು ತೆರೆಯಲಾಗಿರುವ ಸಹಾಯವಾಣಿ ಸಂ. 8277506000 ಯನ್ನು ಗ್ರಾಪಂನಲ್ಲಿ ಪ್ರದರ್ಶಿಸಬೇಕು. ಅಲ್ಲದೆ ವಿವಿಧ ಯೋಜನೆಗಳ ಕಡತಗಳನ್ನು ಚೆಕ್ ಲಿಸ್ಟ್ ಪ್ರಕಾರ ನಿರ್ವಹಿಸಬೇಕು ಎಂದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ವಾಹಿನಿಗಳು ಸುಸ್ಥಿತಿಯಲ್ಲಿರಬೇಕು. ಪ್ರತಿ ದಿನ ಒಣ ತ್ಯಾಜ್ಯವನ್ನು ಸಂಗ್ರಹಿಸಿ ಎಸ್‌ಡಬ್ಲ್ಯುಎಂ ಶೆಡ್‌ಗಳಲ್ಲಿ ಸಂಗ್ರಹಣೆ ಮಾಡಲು ಕ್ರಮ ವಹಿಸಬೇಕು. ಸಂಗ್ರಹವಾದ ತ್ಯಾಜ್ಯವನ್ನು ಎಂಆರ್‌ಎಫ್ ಘಟಕಕ್ಕೆ ಸಾಗಣೆ ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಎನ್‌ಆರ್‌ಎಲ್‌ಎಂ ಯೋಜನೆಯಡಿ ಜಿಪಿಎಲ್‌ಎಫ್ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಕಚ್ಚಾ ವಸ್ತು ಖರೀದಿಸಲು, ಉತ್ಪನ್ನಗಳನ್ನು ಸಂಗ್ರಹ ಮಾಡಲು ಹಾಗೂ ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸಲು ಗ್ರಾಮ ಪಂಚಾಯಿತಿಗಳು ಅಗತ್ಯ ಕ್ರಮ ವಹಿಸಬೇಕು. ಹಳೆಯ ಶಾಲಾ ಕಟ್ಟಡಗಳಿದ್ದಲ್ಲಿ, ಅಂತಹ ಕಟ್ಟಡಗಳನ್ನು ತಾತ್ಕಾಲಿಕವಾಗಿ ಎನ್‌ಆರ್‌ಎಲ್‌ಎಂ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಿದರು.

15ನೇ ಹಣಕಾಸು ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಐಪಿಎಎಪಿ ತಂತ್ರಾಂಶದ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಯೋಜನೆಯಡಿ ಭರಿಸಲಾಗುವ ವೆಚ್ಚವನ್ನು ಮೇಲ್ವಿಚಾರಣೆ ಮಾಡಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆಯನ್ನು ಇಂಡೀಕರಿಸುವಂತೆ ಸೂಚಿಸಿದರು.

ಜನರನ್ನು ಸತಾಯಿಸದೆ ಕೆಲಸ ಮಾಡಿಕೊಡಿ: ವಿವಿಧ ಕೆಲಸಗಳನ್ನು ಮಾಡಿಕೊಡುವಂತೆ ಕೋರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಸತಾಯಿಸದೇ, ಗೌರವಕೊಟ್ಟ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಸೂಚನೆ ನೀಡಿದರು. ಇ-ಸ್ವತ್ತು, ಸಕಾಲ ಸೇರಿದಂತೆ ವಿವಿಧ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುತ್ತಿಲ್ಲ. ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎನ್ನುವ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕೃತವಾಗುತ್ತಿದೆ. ಇದು ತಪ್ಪಬೇಕು. ಇದನ್ನು ಸಹಿಸಲು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಸೂಕ್ತ ಹಿಂಬರಹವನ್ನು ನಿಗದಿತ ಅವಧಿಯೊಳಗೆ ನೀಡಬೇಕು ಎಂದು ಹೇಳಿದರು.

ಗ್ರಾಪಂ ಮತ್ತು ತಾಪಂ ಮಟ್ಟದಲ್ಲೇ ಪರಿಹರಿಸಬಹುದಾದ ಬಹುತೇಕ ಸಮಸ್ಯೆಗಳ ಅರ್ಜಿ ಹಿಡಿದು ಸಾರ್ವಜನಿಕರು ಜಿಲ್ಲಾ ಮಟ್ಟದ ಕಚೇರಿವರೆಗೂ ಬರುತ್ತಿದ್ದಾರೆ. ಇದು ಮುಂದುವರಿದಲ್ಲಿ ಸಂಬಂಧಪಟ್ಟವರಿಂದ ವಿವರಣೆ ಕೇಳಿ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net