ವಾರಾಂತ್ಯದೊಳಗೆ ಬಾಕಿ ಇ- ಖಾತಾ ವಿತರಣೆ: ತುಷಾರ್ ಗಿರಿನಾಥ್ ಹೇಳಿಕೆ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿ ಬಾಕಿ ಉಳಿದಿರುವ ಇ-ಖಾತಾಗಳನ್ನು ಈ ವಾರಾಂತ್ಯದೊಳಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈಗಾಗಲೇ ಇ-ಆಸ್ತಿ ವೆಬ್‌ಸೈಟ್‌ನಿಂದ ನಾಗರಿಕರು 6 ಲಕ್ಷ ಸಂಖ್ಯೆಯಷ್ಟು ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಜತೆಗೆ 21,369 ಸ್ವತ್ತುಗಳಿಗೆ ಅಂತಿಮ ಇ-ಖಾತಾ ವಿತರಿಸಿದ್ದು, ಇನ್ನೂ 14 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಆದ್ಯತೆ ಮೇರೆಗೆ ವಿತರಿಸುವಂತೆ ಸೋಮವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಕಿ ಉಳಿದಿರುವ ಇ-ಖಾತಾ ವಿತರಿಸಲು ಆಗುತ್ತಿರುವ ವಿಳಂಬ ತಪ್ಪಿಸಲು ಹೆಚ್ಚುವರಿಯಾಗಿ ವಿಭಾಗವಾರು ಸಹಾಯಕ ಕಂದಾಯ ಅಧಿಕಾರಿಗಳನ್ನು (ಎಆರ್‌ಒ) ನಿಯೋಜಿಸಲಾಗುವುದು. ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಇ-ಖಾತಾ ವಿತರಿಸಲು ಪಾಲಿಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿ ಬುಧವಾರ ಕಂದಾಯ ಅದಾಲತ್:

ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ನಾಗರಿಕರ ಕುಂದು-ಕೊರತೆ ನಿವಾರಿಸಲು ಸ್ಥಳೀಯ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಕಂದಾಯ ಅದಾಲತ್ ನಡೆಯಲಿದ್ದು, ಅಲ್ಲಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಕಂದಾಯೇತರ ವಿಷಯಗಳಿಗೆ ವಾಡ್ ಇಂಜಿನಿಯರ್, ಎಇಇ ಸಭೆ ನಡೆಸಿ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಮಳೆಗೆ ಮುಂಜಾಗ್ರತಾ ಕ್ರಮ:

ಫೆಂಗಲ್ ಚಂಡಮಾರುತ ಹಿನ್ನೆಲೆ ನಗರದಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದೆ. ಭಾರಿ ಮಳೆ ಬರುವುದೆಂದು ನಿರೀಕ್ಷಿಸಿದ್ದರೂ, ಅಷ್ಟು ಪ್ರಮಾಣದಲ್ಲಿ ಸುರಿದಿಲ್ಲ. ಆದರೂ ಬುಧವಾರದವರೆಗೆ ಪಾಲಿಕೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಲಿದ್ದಾರೆ. ಎಲ್ಲ ವಲಯಗಳಲ್ಲೂ ಸಮಸ್ಯಾತ್ಮಕ ರಾಜಕಾಲುವೆಗಳಲ್ಲಿ ಹೂಳೆತ್ತುವಿಕೆ, ಪ್ರಮುಖ ಸ್ಥಳಗಳಲ್ಲಿ ಸೈಡ್ ಡ್ರೈನ್‌ಗಳನ್ನು ಸ್ವಚ್ಛಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಕೆಲಸ ಮಾಡಲು ಸೂಚಿಸಲಾಗಿದೆ. ಜತೆಗೆ ಮರ ತೆರವು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದ್ದು, ದೂರು ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಒದಗಿಸಲಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net