ಪಿಎಲ್‌ಡಿ ಬ್ಯಾಂಕ್‌ನಿಂದ ರೈತರಿಗೆ ಸಾಲ ವಿತರಣೆ

18 CRP-3A
ಚನ್ನರಾಯಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕಿನಿಂದ ವಿವಿಧ ಯೋಜನೆಗಳಡಿ 2 ಕೋಟಿ ರೂ.ಗಳ ಸಾಲದ ಚೆಕ್‌ಅನ್ನು ಬ್ಯಾಂಕಿನ ಅಧ್ಯಕ್ಷ ಎಂ.ಶಂಕರ್ ಶುಕ್ರವಾರ ವಿತರಿಸಿದರು. ಜಯಲಕ್ಷ್ಮಮ್ಮ, ಎನ್.ಟಿ.ಬೊಮ್ಮೇಗೌಡ, ಬಿ.ಎಂ.ಆರ್.ಮಂಜುನಾಥ್, ಎಂ.ಎ.ರಂಗಸ್ವಾಮಿ, ಕೆ.ಜೆ. ಬಾಬು, ರಾಘವೇಂದ್ರ ಇತರರಿದ್ದರು.
Published on

ಚನ್ನರಾಯಪಟ್ಟಣ: ರೈತರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದರಿಂದ ಇತರ ರೈತರಿಗೆ ಸಾಲ ನೀಡುವುದರ ಜತೆಗೆ ಬ್ಯಾಂಕಿನ ಅಭಿವೃದ್ಧಿಗೂ ಅವಕಾಶವಾಗಲಿದೆ. ಆದ್ದರಿಂದ ಈಗ ಪಡೆಯುತ್ತಿರುವ ಸಾಲವನ್ನು ನಿಯಮಿತವಾಗಿ ರೈತರು ಕಟ್ಟಲು ಮುಂದಾಗಬೇಕೆಂದು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಎಂ.ಶಂಕರ್ ಹೇಳಿದರು.

ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನಿಂದ ಹೊಸದಾಗಿ ನೀಡಲಾಗುತ್ತಿರುವ ಸಾಲದ ಚೆಕ್‌ಗಳನ್ನು ಶುಕ್ರವಾರ ಬ್ಯಾಂಕಿನ ಸಭಾಂಗಣದಲ್ಲಿ ರೈತರಿಗೆ ವಿತರಿಸಿ ಮಾತನಾಡಿದ ಅವರು, ಇಬ್ಬರು ರೈತರಿಗೆ ಟ್ರ್ಯಾಕ್ಟರ್ ಸಾಲ, 22 ಜನರಿಗೆ ಕುರಿ ಸಾಕಾಣಿಕೆಗೆ ಸಾಲ, 3 ಜನರಿಗೆ ಮೇಕೆ ಸಾಕಾಣಿಕೆ ಸಾಲ ಸೇರಿ ಭೂ ಅಭಿವೃದ್ಧಿ ಕಾರ್ಯಗಳಿಗೆ 1.25 ಕೋಟಿ ರೂ. ಸಾಲ ಸೇರಿ ಒಟ್ಟಾರೆ 2 ಕೋಟಿ ರೂ. ಸಾಲದ ಚೆಕ್‌ಅನ್ನು ನೀಡಲಾಗುತ್ತಿದೆ. ಇದನ್ನು ಪಡೆವ ರೈತರು ಸಕಾಲಕ್ಕೆ ಸಾಲ ಮರುಪಾವತಿಗೆ ಮುಂದಾಗಬೇಕು. ರಾಜ್ಯ ಸರ್ಕಾರ ಸುಸ್ತಿ ಸಾಲವನ್ನು ಒಮ್ಮೆಲೇ ಕಟ್ಟುವಲ್ಲಿ ರೈತರಿಗೆ ನೆರವಾಗಲೆಂದು ಬಡ್ಡಿ ಮನ್ನಾ ಯೋಜನೆ ಜಾರಿ ಮಾಡಿದ ಸಲುವಾಗಿ ಸುಸ್ತಿಯಾಗಿದ್ದ ಬ್ಯಾಂಕಿನ 10 ಕೋಟಿ ರೂ. ಸಾಲದ ಪೈಕಿ 4.85 ಕೋಟಿ ರೂ.ಗಳನ್ನು ರೈತರು ಕಟ್ಟಿದ್ದು, ಇದರಿಂದ 4.88 ಲಕ್ಷ ರೂ. ಬಡ್ಡಿ ಸರ್ಕಾರದಿಂದ ಬ್ಯಾಂಕಿಗೆ ಜಮೆಯಾಗಬೇಕಾಗಿದೆ ಎಂದರು.

ದುಸ್ಥಿತಿಯಲ್ಲಿದ್ದ ಬ್ಯಾಂಕಿಗೆ ಸರ್ಕಾರದ ಬಡ್ಡಿಮನ್ನಾ ಯೋಜನೆಯಿಂದಾಗಿ ಬಲ ಹೆಚ್ಚಿದ್ದು, ಆದಾಗ್ಯೂ ಈ ಯೋಜನೆಯ ಲಾಭ ಪಡಯುವಲ್ಲಿ ಬಹುತೇಕ ರೈತರು ವಿಫಲವಾಗಿ 6 ಕೋಟಿ ರೂ.ನಷ್ಟು ಹಣ ಸಾಲ ಸುಸ್ತಿಯಾಗಿಯೇ ಉಳಿದಿದೆ ಎಂದ ಅವರು, ನಬಾರ್ಡ್ ಗ್ರಾಮೀಣ ವಸತಿ ಯೋಜನೆಯಡಿ ತಾಲೂಕಿನ 104 ರೈತರು ಸಾಲ ಪಡೆದು, ಸಾಲ ತೀರುವಳಿಯಾಗದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ಬಡ್ಡಿ ಮನ್ನಾದ ಕುರಿತು ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿಯೂ ಶೀಘ್ರ ಬಡ್ಡಿ ಮನ್ನಾ ಘೋಷಿಸುವ ಹಿನ್ನೆಲೆಯಲ್ಲಿ ರೈತರು ಗ್ರಾಮೀಣ ವಸತಿ ಯೋಜನೆಯಡಿ ಅಸಲು ಕಟ್ಟಿ ಸಾಲ ಮುಕ್ತರಾಗಬೇಕೆಂದು ಮನವಿ ಮಾಡಿದರು.

ಬ್ಯಾಂಕಿನ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ನಿರ್ದೇಶಕರರಾದ ಎನ್.ಟಿ.ಬೊಮ್ಮೇಗೌಡ, ಬಿ.ಎಂ.ಆರ್.ಮಂಜುನಾಥ್, ಎಂ.ಎ.ರಂಗಸ್ವಾಮಿ, ಕೆ.ಜೆ.ಬಾಬು, ರಾಘವೇಂದ್ರ, ನಂಜುಂಡೇಗೌಡ, ಕಾರೇಹಳ್ಳಿ ನಟೇಶ್, ಮಧುಕುಮಾರ್, ಪರಮೇಶ್, ಪ್ರಕಾಶ್ ಸೇರಿ ಬ್ಯಾಂಕಿನ ವ್ಯವಸ್ಥಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net