

ಧಾರವಾಡ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಬಾರದು. ಅಂತಹ ವಿದ್ಯಾರ್ಥಿಗಳಿಗೆ ಸಮಾಜ ಆರ್ಥಿಕ ಸಹಾಯ, ಬೆಂಬಲ ನೀಡಿ, ಸಮಾಜಕ್ಕೆ ಆಸ್ತಿ ಆಗುವಂತೆ ನೋಡಿಕೊಳ್ಳುವುದು ಪ್ರತಿಯೊಂದು ಜಾಗೃತ ಸಮಾಜದ ಕರ್ತವ್ಯ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಜೈನ ಮಿಲನ ಸಂಸ್ಥೆಯು ಇತ್ತೀಚೆಗೆ ಆಯೋಜಿಸಿದ್ದ ಶಿಷ್ಯವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳಿಂದ ಶಿಕ್ಷಣವನ್ನು ಮೊಟಕುಗೊಳಿಸಿರುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಧಾರವಾಡ ಜೈನ ಮಿಲನ ಕಾರ್ಯ ಪ್ರಶಂಸನೀಯ ಎಂದರು.
ಡಾ. ಜಿನದತ್ತ ಹಡÀಗಲಿ ಅವರು ಬರೆದ `ಜಿನಸ್ತುತಿ' ಗ್ರಂಥವನ್ನು ಡಾ. ಅಜಿತ ಪ್ರಸಾದ್ ಬಿಡುಗಡೆಗೊಳಿಸಿದರು. ಜಿಲ್ಲೆಯ ೬೨ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು. ಶೈಕ್ಷಣಿಕ ಸಮಿತಿಯ ಅಧ್ಯಕ್ಷ ಮಹಾವೀರ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈನ ಮಿಲನ ಕಾರ್ಯದರ್ಶಿ ಸುನಂದಾ ವರೂರ ನಿರೂಪಿಸಿದರು. ಖಜಾಂಚಿ ಸಂಗೀತಾ ಉಪಾಧ್ಯೆ ಮಾಸಿಕ ವರದಿ ಮಂಡಿಸಿದರು. ಅಧ್ಯಕ್ಷೆ ಸುಜಾತಾ ಹಡಗಲಿ ಅಧ್ಯಕ್ಷತೆ ವಹಿಸಿದ್ದರು. ವಾಣಿ ಪ್ರಸಾದ್, ಕ್ಷಮಾ ಜೈನ್, ಇತರರಿದ್ದರು.