ಜವಾಬ್ದಾರಿ ನಿಭಾಯಿಸುವ ಮಹಿಳೆಗೆ ಸೂಕ್ತ ಸ್ಥಾನಮಾನ : ಜಯಲಕ್ಷ್ಮೀ ರಾಯಕೋಡ್ ಪ್ರತಿಪಾದನೆ

New Project (10)
Published on

ಬಂಟ್ವಾಳ: ಎಲ್ಲ ಜವಾಬ್ದಾರಿ ನಿಭಾಯಿಸುವ ಮಹಿಳೆಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನ ಸಿಗಬೇಕು. ಮಹಿಳೆಗೆ ತನ್ನ ಸ್ಥಾನಮಾನ ಏನು ಎನ್ನುವುದು ಅರಿವಾಗಬೇಕಾದರೆ ಮನೆಯಿಂದ ಹೊರ ಬಂದು ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪುರುಷರ ಸಹಕಾರ, ಸಹಭಾಗಿತ್ವ ಇದ್ದಾಗ ಮಹಿಳೆ ಸಾಧನೆ ಮಾಡಲು ಸಾಧ್ಯ ಎಂದು ದ.ಕ.ಜಿ.ಪಂ. ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಂಗಳೂರು, ಬಂಟ್ವಾಳ ತಾಪಂ, ಬಂಟ್ವಾಳ ಭಾರತಾಂಬೆ ಸಂಜೀವಿನಿ ತಾಲೂಕುಮಟ್ಟದ ಮಹಿಳಾ ಒಕ್ಕೂಟ ಸಹಯೋಗದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಭವನ ಬಿ.ಸಿ.ರೋಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇದ ಪುರಾಣಗಳ ಕಾಲದಲ್ಲಿಯೇ ಮಹಿಳೆಯರಿಗೆ ಉನ್ನತ ಸ್ಥಾನವಿತ್ತು. ಕೌಟುಂಬಿಕ ಹಿಂಸೆಯಿಂದ ಮಹಿಳೆಯನ್ನು ಮುಕ್ತಗೊಳಿಸಲು ಆರ್ಥಿಕ ಸಬಲೀಕರಣಗೊಳಿಸಬೇಕು. ಬುದ್ಧಿವಂತರ ಜಿಲ್ಲೆಯಲ್ಲಿ ಸಂಸ್ಕಾರವಂತರ ಸಂಖ್ಯೆ ಕಡಿಮೆಯಾಗುತ್ತಿದೆ. ಕಡೇಶಿವಾಲಯದ ಲಕ್ಷ್ಮೀ ಕಸ ಸಂಗ್ರಹ ವಾಹನದ ಚಾಲಕಿಯಾಗಿರುವುದು ರಾಜ್ಯದಲ್ಲೇ ಪ್ರಥಮ ಎಂದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಟ್ಟು ಉದ್ಯೋಗ ನೀಡಿದರೆ ಸಾಕಾಗುವುದಿಲ್ಲ. ಮಕ್ಕಳ ಚಲನವಲನದ ಬಗ್ಗೆ ಗಮನ ಹರಿಸಬೇಕು. ಮಕ್ಕಳಿಗೆ ಸಂಪತ್ತು ಮಾಡಬೇಡಿ ಮಕ್ಕಳನ್ನೇ ಸಂಪತ್ತು ಮಾಡಿ ಎಂದು ತಿಳಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಇಪ್ಪತ್ತೇಳು ಗ್ರಾಪಂ ಸ್ವಚ್ಛವಾಹಿನಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಸಂಜೀವಿನಿಯ 1432 ಸ್ವಸಹಾಯ ಸಂಘ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 14973 ಸದಸ್ಯರು ಇದರಲ್ಲಿದ್ದಾರೆ. ಇದುವರೆಗೆ 14.64 ಕೋಟಿ ರೂ. ಬ್ಯಾಂಕ್ ಸಾಲ ವಿತರಿಸಲಾಗಿದೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಸಂಜೀವಿನಿ ಸಂತೆ ಉದ್ಘಾಟಿಸಿದರು. ಯೋಜನಾ ನಿರ್ದೇಶಕ ಜಯರಾಮ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನಿತಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮಮ್ತಾಝ್, ಸಂಪನ್ಮೂಲ ವ್ಯಕ್ತಿ ಕಸ್ತೂರಿ ಬೊಳುವಾರ್, ಭಾರತಾಂಬೆ ಸಂಜೀವಿನಿ ತಾಲೂಕುಮಟ್ಟದ ಮಹಿಳಾ ಒಕ್ಕೂಟ ಅಧ್ಯಕ್ಷೆ ಆಕರ್ಷಿಣಿ, ಮಂಗಳೂರು ರೀಜನಲ್ ಆಫೀಸರ್ ದಿನೇಶ್ ಉಪಸ್ಥಿತರಿದ್ದರು. ಸೌಮ್ಯಾ ಭಂಡಾರಿಬೆಟ್ಟು ಸ್ವಾಗತಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net