ಅತಿವೃಷ್ಟಿ, ಪ್ರಕೃತಿ ವಿಕೋಪ ಪರಿಸ್ಥಿತಿ ನಿಭಾಯಿಸಲು ಸನ್ನದ್ದ

hnl1
Published on

ಹೊನ್ನಾಳಿ: ಅತಿವೃಷ್ಟಿ, ಪ್ರಕೃತಿ ವಿಕೋಪ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾ, ತಾಲೂಕು ಅಡಳಿತಗಳು ಸರ್ವಸನ್ನದ್ದವಾಗಿವೆ. ಜನರು ಈ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲೆ ವಿಪತ್ತು ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಬಾಲರಾಜ್ ಘಾಟ್, ಬಂಬೂಬಜಾರ್, ಸಾಸ್ವೆಹಳ್ಳಿ ಪ್ರದೇಶ ಪ್ರವಾಹ ಪೀಡಿತವಾಗಿದ್ದು, ತುಂಗಾಭದ್ರಾ ನದಿ ನೀರಿನ ಮಟ್ಟ 13 ಮೀಟರ್ ಮೀರಿದರೆ ಚೀಲೂರಿನ ಗ್ರಾಮಗಳು ಪ್ರವಾಹ ಪೀಡಿತವಾಗುವ ಸಾಧ್ಯತೆ ಇವೆ. ಹೊನ್ನಾಳಿಯಲ್ಲಿ 28 ಕುಟುಂಬಗಳ 125 ಸಂತ್ರಸ್ತರನ್ನು ಗುರುತಿಸಿದ್ದು, ಪಟ್ಟಣದಲ್ಲಿ 2, ಸಾಸ್ವೆಹಳ್ಳಿಯಲ್ಲಿ 1 ಕಾಳಜಿ ಕೇಂದ್ರ ಗುರುತಿಸಿ ಸಿದ್ಧ್ದಪಡಿಸಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆ ನೀರಿನಿಂದ ಸೋರುತ್ತಿದ್ದರೆ ಮಾತ್ರ ಅವುಗಳ ತಾತ್ಕಾಲಿಕ ದುರಸ್ತಿಗೆ ಹಣ ಲಭ್ಯವಿರುತ್ತದೆ. ತಹಸೀಲ್ದಾರ್ ವಿಪತ್ತಿನ ಪಿಡಿ ಖಾತೆಯಲ್ಲಿ 64.24 ಲಕ್ಷ ರೂ. ಹಾಗೂ ನ್ಯಾಮತಿ ತಾಲೂಕಿನಲ್ಲಿ 38 ಲಕ್ಷ ರೂ. ಹಣವಿದ್ದು, ಶಾಲೆಗಳ ಮೇಲ್ಛಾವಣೆ ದುರಸ್ತಿಗೆ 2 ಲಕ್ಷದವರೆಗೆ ಹಣ ನೀಡಬಹುದಾಗಿದೆ. ಈ ಬಗ್ಗೆ ನಿಖರ ಮಾಹಿತಿ ತಯಾರಿಸಿಕೊಡಬೇಕು. ಮಾಹಿತಿಯಲ್ಲಿ ಲೋಪದೋಷ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅತಿವೃಷ್ಟಿಯಿಂದ ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ದುರಸ್ತಿಗೆ ಕೂಡ ಅವಕಾಶವಿದ್ದು, ಅಧಿಕಾರಿಗಳು ಖುದ್ದು ಪರಿವೀಕ್ಷಣೆ ಮಾಡಿ ನಿಖರ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.

ಅತಿವೃಷ್ಟಿಯಿಂದ ಮನೆ ಸಂಪೂರ್ಣ ಹಾನಿಯಾಗಿದ್ದರೆ 1.20 ಲಕ್ಷ ರೂ., ಭಾಗಶಃ ಹಾನಿಯಾದರೆ 6,500 ರೂ., ಕಚ್ಚಾಮನೆಗಳಾದರೆ 4 ಸಾವಿರ ರೂ. ಪರಿಹಾರ ಕೊಡಲಾಗುವುದು. ಪ್ರವಾಹ ಪೀಡಿತ ಕಾರಣಕ್ಕಾಗಿ ಮನೆ ಸ್ಥಳಾಂತರಿಸುವ ಸಂದರ್ಭದಲ್ಲಿ ಸಂತ್ರಸ್ತರಿಗೆ ದಿನಸಿ ಮತ್ತು ಇತರೆ ಪರಿಕರಗಳಿಗಾಗಿ 2500 ರೂ. ಹಣ ಮಂಜೂರು ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ಮಳೆಯಿಂದ ದನಕರು ಮರಣ ಹೊಂದಿದರೆ ಪಶುವೈದ್ಯ ಇಲಾಖೆ ಮರಣೋತ್ತರ ಪರೀಕ್ಷಾ ವರದಿ ಕೂಡಲೇ ತಮಗೆ ಕಳುಹಿಸಿಕೊಡಬೇಕು. ಇನ್ನು ಬೆಳೆ ಹಾನಿ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳ ಜತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯಮಾಡಿ ನಷ್ಟದ ಬಗ್ಗೆ ವರದಿ ತಯಾರಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಸುರೇಶ್ ಹಿಟ್ನಾಳ್ ಮಾತನಾಡಿ, ತಾಲೂಕಿನಲ್ಲಿ ಪ್ರವಾಹ ಪೀಡಿತ 13 ಗ್ರಾಪಂಗಳ ವ್ಯಾಪ್ತಿಯಲ್ಲಿ 32 ಗ್ರಾಮಗಳು, ನ್ಯಾಮತಿ ತಾಲೂಕಿನ 1 ಗ್ರಾಪಂ ಇದೆ. ಪಿಡಿಒಗಳು ಕಡ್ಡಾಯ ಕೇಂದ್ರ ಸ್ಥಾನದಲ್ಲಿದ್ದು, ಈಜುಗಾರರು, ಹಾವು ಹಿಡಿಯುವವರು, ಜೆಸಿಬಿ ಯಂತ್ರಗಳ ಮಾಲಿಕರು, ಸ್ವಯಂ ಸೇವಕರ ಮಾಹಿತಿ, ಅವರ ಮೊಬೈಲ್ ಸಂಖ್ಯೆಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಷಣ್ಮುಖಪ್ಪ, ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಜಗಳೂರು ತಹಸೀಲ್ದಾರ್ ಫೀರೋಜ್ ಷಾ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ, ತಾಪಂ ಇಒ ರಾಘವೇಂದ್ರ, ಬಿಇಒ ನಿಂಗಪ್ಪ, ಎಸ್ಡಿಆರ್‌ಎಫ್ ಡೆಪ್ಯೂಟಿ ಕಮಾಂಡರ್ ಹೇಮಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net