

ಮಂಡ್ಯ: ಜಿಲ್ಲೆಯಲ್ಲಿ ಕುಡಿಯುವ ನೀರಿಸ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ ಮಾಹೆಯಲ್ಲಿ ಮಳೆ ಬರುವ ಸಾಧ್ಯತೆ ಇದೆ. ಆದರೆ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಕುಡಿಯುವ ನೀರಿನ ಒದಗಿಸುವ ಬಗ್ಗೆ ಮೊದಲ ಆದ್ಯತೆ ನೀಡಿ ಎಂದರು.
ತಹಸೀಲ್ದಾರ್ ಹಾಗೂ ತಾಪಂ ಇಒಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಗ್ರಾಮದ ಪಟ್ಟಿ ಮಾಡಿಕೊಳ್ಳಬೇಕು. ಬಹುಗ್ರಾಮ ಕುಡಿಯುವ ನೀರು, ಜೆ.ಜೆ.ಎಂ ಸೇರಿದಂತೆ ವಿವಿಧ ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದ್ದು, ಕುಡಿಯುವ ನೀರಿನ ತೊಂದರೆ ಇರುವ ಗ್ರಾಮವನ್ನು ಸ್ಥಳ ಭೇಟಿ ಮಾಡಿ ನಿಖರವಾಗಿ ಪಟ್ಟಿ ಮಾಡಿಕೊಳ್ಳಿ. ಟ್ಯಾಂಕರ್‌ನಲ್ಲಿ ನೀರು ಕೊಡುವುದು ಕೊನೆಯ ಹಂತವಾಗಿರುತ್ತದೆ. ಮೊದಲ ಹಂತದಲ್ಲಿ ಬೋರ್‌ವೆಲ್ ಗಳನ್ನು ಫ್ಲಷಿಂಗ್ ಹಾಗೂ ಡೀಪ್ನಿಂಗ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳ ವ್ಯಾಪ್ತಿಯಲ್ಲಿರುವ ಖಾಸಗಿ ಬೋರ್‌ವೆಲ್ಗಳನ್ನು ಪಟ್ಟಿ ಮಾಡಿಕೊಳ್ಳಿ. ಈ ಬೋರ್‌ವೆಲ್ಗಳಿಂದ ನೀರು ಪಡೆಯುವ ಸಂದರ್ಭದಲ್ಲಿ ನೀರಿನ ಪ್ರಮಾಣವನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಇಂಜಿನಿಯರ್‌ನಿಂದ ದೃಢೀಕರಣ ಪಡೆದುಕೊಳ್ಳಬೇಕು. ಮಾಲೀಕರಿಂದ ನೀರು ಪಡೆಯುವ ದಿನಾಂಕದಿಂದ ಒಪ್ಪಂದ ಮಾಡಿಕೊಳ್ಳಬೇಕು. ನೀರು ಪೂರೈಕೆಗೆ ಮುನ್ನ ಪರೀಕ್ಷೆಗೆ ಒಳಪಡಿಸಿ. ಆಗ ಬಿಲ್ ಪಾವತಿಗೆ ತೊಂದರೆಯಾಗುವುದಿಲ್ಲ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಬಿಸಿಲು ಹೆಚ್ಚಿರುವುದರಿಂದ ಬಿಸಿ ಗಾಳಿ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಕುರಿತು ಆರೋಗ್ಯ ಇಲಾಖೆಯಿಂದ ಹೆಚ್ಚು ಐ.ಇ.ಸಿ ಕಾರ್ಯಕ್ರಮ ಆಯೋಜಿಸಿ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಮನ್ವಯತೆ ಅತಿ ಮುಖ್ಯ. ಅನುದಾನದ ಕೊರತೆ ಇಲ್ಲ. ನಿಗದಿತ ಸಮಯಕ್ಕೆ ಬಿಲ್ ಪಾವತಿಯಾಗಬೇಕು. ಜಲ ಜೀವನ್ ಮಿಷನ್ ಯೋಜನೆಯಡಿ ಬೋರ್‌ವೆಲ್ಗಳು ಲಭ್ಯವಿದ್ದು, ಅವುಗಳಿಗೆ ಚೆಸ್ಕಾಂ ಸಹಾಯದಿಂದ ವಿದ್ಯುತ್ ವ್ಯವಸ್ಥೆ ಮಾಡಿದರೆ ಬಹಳಷ್ಟು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಸಿ ಕಸ, ಒಣ ಕಸ ಪ್ರತ್ಯೇಕ ಮಾಡಿ ವಿಲೇವಾರಿಗೊಳಿಸಿ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ವಚ್ಛಗೊಳಿಸಿ, ಆಗಾಗ ನೀರನ್ನು ಪರಿಶೀಲಿಸಿ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದು. ಗ್ರಾಮೀಣ ಭಾಗದ ಒವರ್ ಹೆಡ್‌ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಕಾರ್ಯಾಪಾಲಕ ಇಂಜಿನಿಯರ್ ಪ್ರಮೋದ್ ಇತರರಿದ್ದರು.