

ಭರತ್ ಶೆಟ್ಟಿಗಾರ್ ಮಂಗಳೂರು
ಕರಾವಳಿಯಲ್ಲಿ ಮಳೆಗಾಲ ಆರಂಭಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಕಳೆದೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪದಂತಹ ಘಟನೆಗಳು ನೋಡಿರುವ ಜನರಲ್ಲಿ ಮಳೆ ಎಂದರೆ ನಡುಕ ಹುಟ್ಟಿಸುವಂತೆ ಮಾಡಿದೆ.
ಆದ್ದರಿಂದ ಈ ಬಾರಿ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿಯೂ ವಿಪತ್ತು ಪ್ರತಿಸ್ಪಂದನಾ ಕಾರ್ಯಪಡೆ ರಚಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಕಳೆದೆರಡು ವರ್ಷ ಮಳೆಗಾಲದಲ್ಲಿ ಸಂಭವಿಸಿದ ಭಾರಿ ಪ್ರಾಕೃತಿಕ ವಿಕೋಪ, ನೆರೆ, ಪ್ರವಾಹ, ಪ್ರಾಣ ಹಾನಿಯಂತಹ ಹಲವು ಘಟನೆಗಳ ಬಳಿಕ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆ.
ತಹಸೀಲ್ದಾರ್ ನೇತೃತ್ವದ ತಂಡ: ತಾಲೂಕು ಮಟ್ಟದ ಈ ಕಾರ್ಯಪಡೆಯ ಅಧ್ಯಕ್ಷರು ಆಯಾ ತಾಲೂಕು ಅಧ್ಯಕ್ಷ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಉಪಾಧ್ಯಕ್ಷರು. ಸಹಾಯಕ ಪೊಲೀಸ್ ಆಯುಕ್ತ, ತಾಲೂಕು ಅಗ್ನಿಶಾಮಕ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರರು, ಪಂಚಾಯತ್‌ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕ್ಷೇತ್ರ ಶಿಕ್ಷಣಾಧಿಕಾರಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಪೌರಾಯುಕ್ತ, ನಗರಸಭೆ, ಪುರಸಭೆ, ನಗರ ಪಂಚಾಯಿತಿ ಮುಖ್ಯಾಧಿಕಾರಿ ತಂಡದ ಸದಸ್ಯರು.
ಕಾರ್ಯನಿರ್ವಹಣೆ: ಈ ಕಾರ್ಯಪಡೆ ವರ್ಷದಲ್ಲಿ ಕನಿಷ್ಠ ಮೂರು ಬಾರಿ ಸಭೆ ಸೇರಿ, ತಾಲೂಕಿನಲ್ಲಿ ವಿಪತ್ತು ನಿರ್ವಹಣೆ ಕುರಿತು ಪರಾಮರ್ಶಿಸಬೇಕು. ಪ್ರತಿ ವರ್ಷ ತಾಲೂಕಿಗೆ ಸಂಬಂಧಿಸಿದ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಬೇಕು. ವಿಪತ್ತು ಸಂಭವಿಸಿದಾಗ ಕೈಗೊಳ್ಳಲಿರುವ ಕ್ರಮದ ಕುರಿತು ತಕ್ಷಣ ರೂಪುರೇಷೆ ತಯಾರಿಸಿ ಪರಿಹಾರ ಕಾರ್ಯದ ಕುರಿತು ತಕ್ಷಣ ಕಾರ್ಯೋನ್ಮುಖರಾಗುವುದು. ಅಧಿಕಾರಿಗಳು ತಮ್ಮೊಳಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುವುದು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಿಕ್ಕೆ ಪ್ರತಿ ವರ್ಷ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಲು ಸಹಕಾರ, ಸಲಹೆ ನೀಡಬೇಕು.
ಅಧಿಕಾರಿಗಳ ವಾಹನಗಳಿಗೆ ಕಿಟ್: ಎಲ್ಲ ಸರ್ಕಾರಿ ವಾಹನಗಳಲ್ಲಿ ಮತ್ತು ಅಧಿಕಾರಿಗಳ ವಾಹನಗಳಲ್ಲಿ ವಿಪತ್ತುಗಳ ಸಂದರ್ಭ ಬಳಕೆಯಾಗುವ ತುರ್ತು ಸಲಕರಣೆಗಳ ಕಿಟ್ ಇರಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಿ ಜಿಲ್ಲೆಯ ಸಹಾಯಕ ಆಯುಕ್ತರು ಮತ್ತು ಎಲ್ಲ ತಹಸೀಲ್ದಾರ್‌ಗಳ ವಾಹನಗಳಿಗೆ ಕಿಟ್ ನೀಡಲಾಗಿದೆ. ಲೈಫ್ ಜಾಕೆಟ್, ಟಾರ್ಚ್, ಸುತ್ತಿಗೆ, ಹಗ್ಗ, ಗಮ್‌ಬೂಟ್, ಮೆಗಾಘೋನ್ ಸೇರಿದಂತೆ 15-20 ವಸ್ತುಗಳು ಕಿಟ್‌ನಲ್ಲಿವೆ. ಸರ್ಕಾರದಿಂದ ಅನುದಾನ ಬಂದರೆ ಇತರ ಅಧಿಕಾರಿಗಳ ವಾಹನಕ್ಕೂ ಕಿಟ್ ವಿತರಿಸಲಾಗುವುದು ಎನ್ನುತ್ತಾರೆ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್ ಕುಮಾರ್.
ದೋಣಿ ಖರೀದಿ: ಕಳೆದ ಬಾರಿ ಪ್ರವಾಹದ ಭೀತಿ ಎದುರಾದ ಸಂದರ್ಭ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ದೋಣಿಗಳ ಅಭಾವ ಉಂಟಾಗಿತ್ತು. ಈ ಬಾರಿಯೂ ಅಂತಹ ತೊಂದರೆಗಳು ಸಂಭವಿಸಬಾರದು ಎಂದು ಹೆಚ್ಚುವರಿಯಾಗಿ ದೋಣಿ, ಲಘು ಬೋಟುಗಳನ್ನು ಖರೀದಿಸಿ, ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳಗಳಿಗೆ ನೀಡಲು ಜಿಲ್ಲಾಧಿಕಾರಿ ಉದ್ದೇಶಿಸಿದ್ದಾರೆ.
ಕನ್ನಡದಲ್ಲಿ ಪುಸ್ತಕ ರಾಜ್ಯದಲ್ಲೇ ಮೊದಲು: ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಪುಸ್ತಕವನ್ನು ಜಿಲ್ಲೆಯಲ್ಲಿ ಕನ್ನಡದಲ್ಲಿ ರಚಿಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲು. ಸಾಮಾನ್ಯವಾಗಿ ಎಲ್ಲ ಜಿಲ್ಲೆಗಳಲ್ಲಿ ಇಂಗ್ಲಿಷ್‌ನಲ್ಲಿ ರಚಿಸಲಾಗುತ್ತದೆ. ಜಿಲ್ಲೆಯಲ್ಲಿ ಇಂಗ್ಲಿಷ್ ಜತೆಗೆ ಕನ್ನಡದಲ್ಲೂ ರಚಿಸಲಾಗಿದೆ. ಪುಸ್ತಕದಲ್ಲಿ ಜಿಲ್ಲೆಯ ಪರಿಚಯ, ಅಪಾಯದ ಮೌಲ್ಯಮಾಪನ, ವಿಪತ್ತು ನಿರ್ವಹಣೆಗೆ ಸಾಂಸ್ಥಿಕ ಕಾರ್ಯವಿಧಾನ, ವಿಪತ್ತು ತಡೆಗಟ್ಟುವ ಕಾರ್ಯವಿಧಾನ, ಜಿಲ್ಲೆಯಲ್ಲಿ ಕೈಗೊಂಡ ಸಿದ್ಧತೆ, ತುರ್ತು ಸಂಪರ್ಕ ಸಂಖ್ಯೆ, ಪುನರ್ವಸತಿ, ಪರಿಹಾರ ಕ್ರಮಗಳ ಕುರಿತು ವಿವರಿಸಲಾಗಿದೆ. ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಸಾಫ್ಟ್ ಪ್ರತಿ ಲಭ್ಯವಿದೆ.
ಸರ್ಕಾರಿ ಅಧಿಕಾರಿಗಳ ವಾಹನಕ್ಕೆ ತುರ್ತು ಸಲಕರಣೆಗಳ ಕಿಟ್ ವಿತರಣೆ ಮಾಡುವ ಯೋಜನೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ಧಾರವಾಗಿದೆ. ನಮ್ಮ ಚಿಂತನೆಯನ್ನು ನೋಡಿ ಇತರ ಜಿಲ್ಲೆಯವರೂ ಕಿಟ್ ಅಳವಡಿಕೆಗೆ ಮುಂದೆ ಬಂದಿದ್ದಾರೆ. ಉಡುಪಿ ಹಾಗೂ ಉತ್ತರ ಕನ್ನಡಲ್ಲಿ ಈಗಾಗಲೇ ಅಳವಡಿಸಲಾಗಿದೆ. - ವಿಜಯ್ ಕುಮಾರ್, ದ.ಕ. ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ