ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Disaster Management Authority Meeting mandya
Published on

ಮಂಡ್ಯ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಇಒ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಮಾತ್ರವಲ್ಲದೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ನೀರು ಪಡೆಯುವ ಮೊದಲು ತಹಸೀಲ್ದಾರ್, ತಾಪಂ ಇಒ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಭಿಯಂತರರು ಲಭ್ಯವಿರುವ ಸರ್ಕಾರಿ ಬೋರ್‌ವೆಲ್ ಗಳಲ್ಲಿ ನೀರು ಪಡೆಯಲು ಸಾಧ್ಯವಿಲ್ಲ ಎಂದು ದೃಢೀಕರಣ ನೀಡಬೇಕು. ನಂತರ ಅನುಮೋದನೆಯಾಗಿರುವ ದರಗಳಂತೆ ಖಾಸಗಿ ಬೋರ್‌ವೆಲ್ನಿಂದ ನೀರು ಪಡೆಯಬೇಕು ಎಂದರು.
ಗ್ರಾಮದಲ್ಲಿ ಇರುವ ಜನಸಂಖ್ಯೆ, ಬೋರ್‌ವೆಲ್ಗಳ ಸಂಖ್ಯೆ, ಮುಂದಿನ ಒಂದು ತಿಂಗಳಲ್ಲಿ ಸಮಸ್ಯೆ ಉಂಟಾಗಬಹುದಾದ ಗ್ರಾಮ, ಕಳೆದ 3-4 ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಗ್ರಾಮ, ಸಮಸ್ಯೆ ಉಂಟಾದಲ್ಲಿ ಪರಿಹರಿಸಲು ಲಭ್ಯವಿರುವ ನೀರಿನ ಮೂಲ ಕುರಿತಂತೆ ವಿಸ್ತೃತ ಪಟ್ಟಿಯನ್ನು ಗ್ರಾಮವಾರು ಸಿದ್ಧಪಡಿಸಿಕೊಳ್ಳಿ. ಖಾಸಗಿ ಬೋರ್‌ವೆಲ್ನಿಂದ ನೀರು ಒದಗಿಸಲು ಲಭ್ಯವಿಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕಾಗುತ್ತದೆ. ಇದಕ್ಕೆ ದರ ನಿಗದಿ ಮಾಡಲು ಟೆಂಡರ್ ಆಹ್ವಾನಿಸಿ ದರ ನಿಗದಿ ಮಾಡಬೇಕು. ಟ್ಯಾಂಕರ್ ಮೂಲಕ ನೀರು ಒದಗಿಸಿದ ಟ್ರಿಪ್‌ಗಳ ವಿವರವನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ನಡುವೆ ಕೃತಕ ನೀರಿನ ಅಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಶಾಸಕರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆಗಳನ್ನು ನಡೆಸುವುದರ ಜತೆಗೆ ಪ್ರತಿ ತಾಲೂಕಿಗೆ ನಿಯೋಜನೆಯಾಗಿರುವ ನೋಡಲ್ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆಯ ಕೊರತೆ ಉಂಟಾದಲ್ಲಿ ನೀರಿನ ಬಳಕೆಯ ಜೀವನಶೈಲಿ ಬದಲಾವಣೆ ಮಾಡಬೇಕಾಗುತ್ತದೆ. ಈ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರೊಂದಿಗೆ ನೀರು ಪೋಲಾಗದಂತೆ ಮಿತವಾಗಿ ಬಳಸುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವಂತೆ ತಿಳಿಸಿದರು.
ಇದೇ ವೇಳೆ ಆಯಾಯ ತಹಸೀಲ್ದಾರ್‌ಗಳಿಂದ ನೀರಿನ ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ತಾಲೂಕುವಾರು ಮಾಹಿತಿ ನೀಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ತಿಳಿಸಿದರು. ಪಶು ವೈದ್ಯಾಧಿಕಾರಿಗಳು ಮುಂದಿನ 23 ವಾರಗಳಿಗೆ ಜಾನುವಾರುಗಳಿಗೆ ಮೇವಿನ ಲಭ್ಯತೆ ಇರುವುದಾಗಿ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಬರ ಮತ್ತು ಬೇಸಿಗೆ ಸಂದರ್ಭದಲ್ಲಿ ಬೇಕಿರುವ ಔಷಧಗಳ ಲಭ್ಯತೆಯ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಆನಂದ್‌ಕುಮಾರ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಪುನೀತ್ ಇತರರಿದ್ದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿರುವ ಕೆರೆಗಳಿಗೆ ಕುಡಿಯುವ ನೀರು ಒದಗಿಸಲು ತುಂಬಿಸಲಾಗಿದೆ. ಆದರೆ ಅದನ್ನು ಮೋಟರ್ ಬಳಸಿ ಬೆಳೆಗಳಿಗೆ ಬಳಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net