

ಮಂಡ್ಯ: ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಾತ್ರವಲ್ಲದೆ ಹವಾಮಾನ ಇಲಾಖೆಯ ವರದಿಯ ಪ್ರಕಾರ ಇನ್ನೂ ಮೂರು ಅಥವಾ ನಾಲ್ಕು ದಿನ ಮಳೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ವಿಪತ್ತು ನಿರ್ವಹಣೆ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯದಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ 4,600 ಕ್ಯೂಸೆಕ್ ನೀರು ಬಿಡಲಾಗಿದೆ. ಕಾವೇರಿ ನದಿಪಾತ್ರದಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಬಾರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕೆ.ಎಚ್.ಬಿ ಕಾಲನಿ ನೀರು ನುಗ್ಗಿತ್ತು. ಅಂತೆಯೇ ಸಿಡಿಎಸ್ ನಾಲೆ ಹೊಡೆದು ಹೋಗಿತ್ತು. ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸ್ಥಳಗಳಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ಪರಿಹಾರಕ್ಕೆ ಪರಿಹಾರ ತಂತ್ರಾಂಶದಲ್ಲಿ ಅಗತ್ಯ ಮಾಹಿತಿ ಒದಗಿಸಿ. ಯಾವುದೇ ಕಾರಣಕ್ಕೂ ಒಬ್ಬ ಸಂತ್ರಸ್ತರನ್ನು ಪರಿಹಾರದ ಪಟ್ಟಿಯಿಂದ ಕೈಬಿಡುವಂತಿಲ್ಲ. ಸಂಬಂಧಪಟ್ಟ ತಹಸೀಲ್ದಾರ್ ಹಾನಿಗೊಳಗದವರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರವನ್ನು ಶೀಘ್ರವಾಗಿ ಕೊಡಿಸಿ ಎಂದು ತಿಳಿಸಿದರು.
ಕೆಎಚ್‌ಬಿ ಕಾಲನಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಇರುವುದರಿಂದ ಕೆಎಚ್‌ಬಿ ಕಾಲನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ ಅಧಿಕಾರಿಗಳೇ ಹೊಣೆ. ಮಳೆಯಿಂದಾಗಿ ಕೆ.ಆರ್.ಪೇಟೆಯ 24 ಶಾಲೆಗಳಿಗೆ ಹಾನಿಯಾಗಿದೆ ಎಂದು ವರದಿ ನೀಡಲಾಗಿದೆ. ತಹಸೀಲ್ದಾರ್ ಖುದ್ದಾಗಿ 24 ಶಾಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿ. ನಾಗಮಂಗಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿತ್ತು. ಈಗಾಗಲೇ ಶೇ.25 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ತಿಂಗಳೊಳಗೆ ಮುಗಿಸಬೇಕು. ಎಣ್ಣೆಹೊಳೆಕೊಪ್ಪಲು ತಡೆಗೋಡೆ ನಿರ್ಮಾಣ ಕಾಮಗಾರಿಯೂ ಶೇ.50ರಷ್ಟು ಮುಗಿದಿದೆ. ಸಂಬಂಧಪಟ್ಟ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕಳೆದ 23 ದಿನದಲ್ಲಿ 74 ಮನೆ ಹಾನಿಗೊಳಗಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮನೆಹಾನಿಯನ್ನು ಪ್ರಮುಖವಾಗಿ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಿ. ಈಗಾಗಲೇ ತಹಸೀಲ್ದಾರ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದ ತಾಕೀತು ಮಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಲು ಅ.24 ಕೊನೆಯ ದಿನವಾಗಿತ್ತು. ಆದರೆ ಮಳೆ ಹಿನ್ನೆಲೆ ಅ.26 ರವರಿಗೆ ಬೆಳೆ ಸಮೀಕ್ಷೆ ದಿನಾಂಕ ವಿಸ್ತರಿಸಲಾಗಿದೆ. ನಿಗದಿತ ಅವಧಿಯೊಳಗೆ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮುಗಿಸಬೇಕು. ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ಬೆಳೆ ಸಮೀಕ್ಷೆಯಲ್ಲಿ ಹಿಂದುಳಿದಿದ್ದು, ಸಂಬಂಧಿಸಿದ ಅಧಿಕಾರಿಗಳು ತಮ್ಮ ಕಾರ್ಯ ದಕ್ಷತೆ ಹೆಚ್ಚಿಸಿ ಕಾರ್ಯ ನಿರ್ವಹಿಸಿ. ನಿಗದಿತ ಅವಧಿಯೊಳಗೆ ಬೆಳೆ ಸಮೀಕ್ಷೆ ಮುಗಿಯದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅ.28ರಂದು ಎನ್‌ಡಿಆರ್‌ಎಫ್‌ನ 25 ಜನರ ತಂಡದಿಂದ ಜಿಲ್ಲೆಯ ತೋರೆಕಾಡನಹಳ್ಳಿಯಲ್ಲಿ ರಾಸಾಯನಿಕ ವಿಪತ್ತು ನಿರ್ವಹಣೆಯ ಕುರಿತಾಗಿ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ತಹಸೀಲ್ದಾರ್ ವಿಶ್ವನಾಥ್, ಮಂಡ್ಯ ಉಪವಿಭಾಗದ ಉಪ ಕೃಷಿ ನಿರ್ದೇಶಕ ಮುನೇಗೌಡ, ವಿಪತ್ತು ನಿರ್ವಹಣೆಯ ವಿಭಾಗದ ಪುನೀತ್, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.