ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಪಾಲಿಕೆ ಬಜೆಟ್ ಮಂಡನೆ: ಕರೊನಾ ಹಿನ್ನೆಲೆ ವಿಳಂಬ- ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲಹೆ ಕೇಳಿದ ಬಿಬಿಎಂಪಿ

bbmp
Published on

ಬೆಂಗಳೂರು: ಕರೊನಾ ಲಾಕ್​ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ವೇಳೆ ಆಯವ್ಯಯ ಮಂಡಿಸುವ ಕುರಿತು ಸಲಹೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ಮನವಿ ಮಾಡಲಾಗಿದ್ದು, ಶೀಘ್ರ 2020-21ನೇ ಸಾಲಿನ ಆಯವ್ಯಯ ಮಂಡಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಎಲ್ಲ ಕಾಮಗಾರಿ ಮತ್ತು ಕೆಲಸ ಕಾರ್ಯಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲು ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಆಯವ್ಯಯ ಮಂಡಿಸುವ ಮಾರ್ಗಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಏ. 8ರಂದು ನಾನು ಪಾಲಿಕೆ ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು ಮನವಿ ಮಾಡಿದ್ದಾರೆ. ಸೋಮವಾರ ಸರ್ಕಾರದಿಂದ ಸೂಚನೆ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಶೇ.30 ಬಜೆಟ್​ಪೂರ್ವ ಅನುದಾನ ನೀಡಲ್ಲ: ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಸರಿಯಾದ ಸಮಯಕ್ಕೆ ಆರ್ಥಿಕ ಆಯವ್ಯಯ ಪಟ್ಟಿ ಸಲ್ಲಿಸದಿದ್ದರೂ, ಈಗ ಬಜೆಟ್ ಗಾತ್ರದ ಶೇ.30 ಅನುದಾನವನ್ನು ಬಜೆಟ್​ಪೂರ್ವ ಬಳಕೆಗೆ ಅನುಮತಿ ಕೇಳಿದ್ದಾರೆ. ಒಂದು ವೇಳೆ ಅನುಮತಿ ಕೊಟ್ಟರೂ ಅನುದಾನ ಖರ್ಚು ಮಾಡಿರುವ ಬಗ್ಗೆ ಲೆಕ್ಕ ಸಿಗುವುದಿಲ್ಲ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

ಆಯವ್ಯಯ ಪಟ್ಟಿ ಸಲ್ಲಿಕೆ ವಿಳಂಬ

ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ, ಹಣಕಾಸು ವಿಶೇಷ ಆಯುಕ್ತರು ಹಾಗೂ ಆಯುಕ್ತರು ಆಯವ್ಯಯ ಪಟ್ಟಿಯನ್ನು ಜ.15ರ ಒಳಗಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಬೇಕು. ಸಮಿತಿ ಅಸ್ತಿತ್ವದಲ್ಲಿರದಿದ್ದರೆ ಮೇಯರ್​ಗೆ ಆಯವ್ಯಯ ಪಟ್ಟಿ ಸಲ್ಲಿಸಬೇಕು. ಆದರೆ ಆಡಳಿತಾಧಿಕಾರಿಗಳು ವಿಳಂಬ ಮಾಡಿದ್ದಾರೆ. ಇದರಿಂದಲೂ ಬಜೆಟ್ ಮಂಡನೆ ವಿಳಂಬವಾಗಿದೆ ಎಂದು ಮೇಯರ್ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಜೆಟ್ ಮಂಡನೆಗೆ ಇರುವ ಮಾರ್ಗಗಳು

ಲಾಕ್​ಡೌನ್ ವೇಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ಸದಸ್ಯರನ್ನು ಒಳಗೊಂಡು ಬಜೆಟ್ ಮಂಡಿಸಬಹುದು.  ಕೆಎಂಸಿ ಕಾಯ್ದೆ ಅನ್ವಯ ಸಾಮಾನ್ಯ ದಿನಗಳಲ್ಲಿ ವ್ಯವಹಾರ ನಿರ್ವಹಣೆ ಅಡಿಯಲ್ಲಿ ಆಯವ್ಯಯ ಮಂಡಿಸಲಾಗುತ್ತದೆ. ಆದರೆ, ಈಗ ತುರ್ತು ಪರಿಸ್ಥಿತಿ ಇರುವ ಕಾರಣ ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಮೇಯರ್, ಉಪ ಮೇಯರ್, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ವಿಪಕ್ಷಗಳ ನಾಯಕರು ಸೇರಿ 11 ಜನರು ಬಜೆಟ್ ಮಂಡಿಸಬಹುದಾಗಿದೆ.  ಲಾಕ್​ಡೌನ್ ಇರುವುದರಿಂದ ಪಾಲಿಕೆ 8 ವಲಯಗಳ ಕಚೇರಿಗಳಲ್ಲಿ ತಲಾ 20 ಸದಸ್ಯರು ಸೇರಲು ಅವಕಾಶವಿದೆ. ಈ 160 ಸದಸ್ಯರ ಒಪ್ಪಿಗೆ ಪಡೆದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮೇಯರ್, ಉಪ ಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಾಯಕರು ಸೇರಿಕೊಂಡು ಆಯವ್ಯಯ ಮಂಡಿಸಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net