

ಜಮಖಂಡಿ: ತೀವ್ರ ಕುತೂಹಲ ಮೂಡಿಸಿದ್ದ ನಗರದ ಪ್ರತಿಷ್ಠಿತ ದಿ. ಜಮಖಂಡಿ ಅರ್ಬನ್ ಕೋಆಪ್ ಬ್ಯಾಂಕ್ ಚುನಾವಣೆಯಲ್ಲಿ ಮತದಾರ ಪ್ರಭುಗಳು ಅಚ್ಚರಿ ಫಲಿತಾಂಶ ನೀಡಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಸಹಕಾರ ಧುರೀಣ ಅರುಣಕುಮಾರ ಶಹಾ ಅವರ ಗುಂಪಿಗೆ 8 ಜನ ಅಭ್ಯರ್ಥಿಗಳು ಸರಿಸಮಾನ ಆಯ್ಕೆಯಾಗಿದ್ದು, ಯಾವುದೇ ಸ್ಪಷ್ಟ ಬಹುಮತ ಸಿಗದಿರುವುದು ಎರಡೂ ಗುಂಪಿಗೆ ನಿರಾಸೆ ಆಗಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವರಾಜ ಮಠಪತಿ ಅವರು 11 ಸಾಮಾನ್ಯ ಅಭ್ಯರ್ಥಿಗಳಲ್ಲೇ 4243 ಅತ್ಯಧಿಕ ಮತ ಪಡೆದು ಆಯ್ಕೆಯಾಗಿದ್ದು ವಿಶೇಷ ಹಾಗೂ ಅವರ ಬೆಂಬಲ ಯಾರಿಗೆ ಸಿಗುತ್ತದೆ ಎಂಬ ತೀವ್ರ ಕುತೂಹಲ ಮೂಡಿಸಿದೆ.
ನಗರದ ಪಿ.ಬಿ. ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಪ.ಜಾ. ಅಪಾಸಾಹೇಬ ಮನಗೂಳಿ 3985, ಪ.ಪಂ. ಅಭ್ಯರ್ಥಿ ನಂದೇಪ್ಪ ತಳವಾರ 3698, ಪ್ರವರ್ಗ ‘ಅ’ ಮಾಮೂನ್‌ರಶೀದ್ ಪಾರ್ಥನಳ್ಳಿ 2179, ಪ್ರವರ್ಗ ‘ಬ’ ಪ್ರಭುಲಿಂಗ ಜನವಾಡ 3193, ಮಹಿಳಾ ಎರಡು ಕ್ಷೇತ್ರದಲ್ಲಿ ಶೋಭಾ ಪ್ರಕಾಶ ಅರಕೇರಿ 3628, ವೈಶಾಲಿ ಆನಂದ ಗೊಂದಿ 3618 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ವರ್ಗದಲ್ಲಿ ಒಟ್ಟು 11 ಸ್ಥಾನಕ್ಕೆ 32 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ ಬಸವರಾಜ ಮಠಪತಿ (4243), ರಾಹುಲ್ ಕಲೂತಿ (3646), ಜಿ.ಎಸ್. ನ್ಯಾಮಗೌಡ (3587), ಕಾಡು ಮಾಳಿ (3558), ಅರುಣಕುಮಾರ ಶಹಾ (3554), ಕೀರಸಾಬ್ ಭಾಗವಾನ (3476), ಬಸವರಾಜ ಕಲೂತಿ (3435), ಎ.ಆರ್. ಶಿಂಧೆ (3086), ಕಿರಣ ಪಿಸಾಳ (2892), ವಿರೂಪಾಕ್ಷಯ್ಯ ಕಂಬಿ (2808), ಧರೇಪ್ಪ ತೇಲಿ 2769 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಭವ್ಯ ಮೆರವಣಿಗೆ: ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗೆದ್ದ ಅಭ್ಯರ್ಥಿಗಳನ್ನು ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರೆ, ಕೆಲ ಅಭಿಮಾನಿಗಳು ಗೆದ್ದ ತಮ್ಮ ಅಭ್ಯಬ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಸಹಾಯಕರಾಗಿ ಸಿದಗಿರಿ ನ್ಯಾಮಗೌಡ, ಎಸ್.ಕೆ. ಸಾರವಾಡ, ಎನ್.ಬಿ. ಮಾಲಗಾರ, ಹಾಗೂ ಪ್ರಧಾನ ವ್ಯವಸ್ಥಾಪಕ ಎಸ್.ಆರ್. ತುಪ್ಪದ, ವ್ಯವಸ್ಥಾಪಕ ಸಂತೋಷ ಹಲ್ಯಾಳ ಹಾಗೂ ಶಿಕ್ಷಕರು ಕಾರ್ಯನಿರ್ವಹಿಸಿದರು. 125 ಆರಕ್ಷಕ ಸಿಬ್ಬಂದಿ, ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಸ್ಥಳೀಯ ಅರ್ಬನ್ ಬ್ಯಾಂಕ್ ಚುನಾವಣೆಯು ಜಿದ್ದಾಜಿದ್ದಿನ ಕಣವಾಗಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಸಹಕಾರಿ ಧುರೀಣ ಅರುಣಕುಮಾರ ಶಹಾ ಎರಡು ಗುಂಪಿನಲ್ಲಿ ಪಕ್ಷಾತೀತವಾಗಿ ಮುಖಂಡರು ಸ್ಪರ್ಧೆಯೊಡ್ಡಿದ್ದರು. ಮತದಾರ ಪ್ರಭುಗಳು ಜಾತಿ ಪಕ್ಷ ಎನ್ನದೆ ಸರಿಸಮಾನ ಲಿತಾಂಶ ನೀಡಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.