

ಚಿಕ್ಕಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನಗಳು ಇದ್ದಕ್ಕಿದ್ದಂತೆ ಕಳವಾಗುತ್ತಿವೆ. ಬೀಗ ಹಾಕಿ ಭದ್ರಪಡಿಸಿಕೊಂಡರೂ ಚಾಲಾಕಿಗಳು ಕಳ್ಳತನ ಕೌಶಲವನ್ನು ಪ್ರದರ್ಶಿಸಿ, ವಾಹನ ತೆಗೆದುಕೊಂಡು ಹೋಗುತ್ತಿದ್ದಾರೆ.
ಒಂದೆಡೆ ಪೊಲೀಸರಿಂದ ಸಮೇತ ಬೈಕ್ ಕಳ್ಳರ ಬಂಧನ, ಮತ್ತೊಂದೆಡೆ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ, ಕಚೇರಿ ಮುಂಭಾಗ ಸೇರಿದಂತೆ ವಿವಿಧೆಡೆ ನಿಲ್ಲಿಸಿರುವ ಬೈಕುಗಳು ಮಾಯವಾಗುವಂತಹ ಪ್ರಕರಣಗಳು ನಡೆಯುತ್ತಲೇ ಇವೆ.
ಬೈಕ್ ಕಳ್ಳರ ಬಂಧನ
ಪ್ರತ್ಯೇಕ ಎರಡು ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಸಮೇತ ವಾಹನಗಳನ್ನು ಮಂಚೇನಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಿನ 4 ರ ವೇಳೆ ಪೇದೆಗಳಾದ ಶಿವಶಂಕರ ಮತ್ತು ಎಂ.ಎನ್.ಸುರೇಶ್ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಕಾಮಲಾಪುರ ಬಳಿ ಆಂಧ್ರದ ಕಲಮರಿ ನರಸಿಂಹಮೂರ್ತಿ ದ್ವಿಚಕ್ರ ವಾಹನದಲ್ಲಿ ಆಯುಧಗಳು ಮತ್ತು ಕೀಲಿಕೈಗಳ ಸೆಟ್ ಅನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ಸಾಗುತ್ತಿರುವುದು ಕಂಡು ಬಂದಿದೆ. ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡಿಲ್ಲ. ಕಳ್ಳತನ ಶಂಕೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪೇದೆಗಳಾದ ಶ್ರೀರಾಮಯ್ಯ ಮತ್ತು ಶಿವಶೇಖರ್ ಗೌರಿಬಿದನೂರು ನಗರದ ಡಿ.ಪಾಳ್ಯ ರಸ್ತೆಯಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲದ ಬಳಿ ಗಸ್ತು ಮಾಡುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ನದಿಗಡ್ಡೆ ರಾಮಣ್ಣ (21 ವರ್ಷ) ಮತ್ತು ಸಂತೆ ಮೈದಾನದ ಎಂ.ಪ್ರಭು (24 ವರ್ಷ) ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದಾರೆ. ಹಿಡಿದುಕೊಂಡು ವಿಚಾರಿಸಿದಾಗ ಪಲ್ಸರ್ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.