

ಬೀಳಗಿ: ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತುಳಸಿಗೇರಿಯ ರಾಮಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಬೀಳಗಿಯ ತಾಲೂಕು ಘಟಕ, ಕುಂದರಗಿಯ ವಲಯ ಘಟಕದ ಆಶ್ರಯದಲ್ಲಿ ಜರುಗಿದ ಬೊಮ್ಮಲಿಂಗೇಶ್ವರ ದ್ವಿತೀಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಶಿವರಾತ್ರಿ ಜಾನಪದ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಂದಿರು ಬೀಸುವಾಗ, ಕುಟ್ಟುವಾಗ, ರೈತರು ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಹಾಡುತ್ತಿದ್ದ ಹಾಡುಗಳು ಯಾಂತ್ರಿಕೃತ ಬದುಕಿನಲ್ಲಿ ಕಣ್ಮರೆಯಾಗುತ್ತಿವೆ. ಜಾನಪದ ಕಲೆಗಳು ತನ್ನದೇ ವೈಶಿಷ್ಟೃವನ್ನು ಹೊಂದಿವೆ. ಮೂಲ ಜಾನಪದ ಕಲೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನಾಂಗಕ್ಕೆ ಜಾನಪದ ಸಾಹಿತ್ಯ ಮತ್ತು ಕಲೆ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜಾನಪದದಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡು ಇದೆ. ಜಾನಪದ ಸಾಹಿತ್ಯದಲ್ಲಿ ಬರುವ ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದರು.
ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದಾವಣಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಉಳಿದರೆ ಮಾತ್ರ ದೇಶದ ಸಂಸ್ಕೃತಿ ಉಳಿಯಲು ಸಾಧ್ಯವಿದೆ. ಜಾನಪದ ಅಳಿದರೆ ಮಾನವ ಕುಲ ಮುಕ್ಕಾದಂತೆ ಎಂದರು.
ವಿವಿಧ ಕಲಾ ಪ್ರದರ್ಶನ ಮಾಡಿದ ಕಲಾವಿದರು, ಕಲಾ ತಂಡಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಬೊಮ್ಮಲಿಂಗೇಶ್ವರ ಆಶ್ರಮದ ಬ್ರಹ್ಮಲಿಂಗ ಮಹಾಸ್ವಾಮಿಗಳು, ಬುದ್ನಿಯ ಸಿದ್ಧಾನಂದ ಮಹಾಸ್ವಾಮಿಗಳು, ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಬಿ. ನಬಿವಾಲೆ, ಕಜಾಪ ಕುಂದರಗಿ ವಲಯ ಘಟಕದ ಅಧ್ಯಕ್ಷ ಪಾಂಡು ಕನಸಗೇರಿ, ಮುಖಂಡರಾದ ಆರ್.ವಿ. ಪಾಟೀಲ, ಸಾಹಿತಿ ಸದಾನಂದ ಏಳಗಂಟಿ, ಬಾಳಪ್ಪ ಗುರಣ್ಣವರ, ಪಿಕೆಪಿಎಸ್ ಅಧ್ಯಕ್ಷ ಬಶೆಟ್ಟೆಪ್ಪ ಅಂಟೀನ, ಮೌನೇಶ ಕಂಬಾರ, ರಾಮಣ್ಣ ಸಾವಕಾರ, ಗಿರೀಶ ಶಿರಬೂರ, ಜಿ.ಸಿ. ಅಂಗಡಿ, ಸದಾಶಿವ ಆಗೋಜಿ ಮತ್ತಿತರರಿದ್ದರು.