ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಸಹಜ

FotoJet (6)
Published on

 ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿಕೆ

ಮಾಗಡಿ : ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಸಮಾಧಾನ- ಅಸಮಾಧಾನ ಇದ್ದೇ ಇರುತ್ತೆ. ರಾಜಕೀಯ ಪಕ್ಷ ಎಂದಮೇಲೆ ಇದು ಸಾಮಾನ್ಯ. ಹೈಕಮಾಂಡ್ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ಬುಧವಾರ ಹುಣ್ಣಿಮೆ ಪ್ರಯುಕ್ತ ಶ್ರೀ ಲಕ್ಷ್ಮಿನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಈಗ ಮಾಡಿ ಅಂದಿದ್ದಾರಾ? ಸೂಕ್ತ ಸಮಯ ಬಂದಾಗ ಬದಲಾವಣೆ ಆಗಬೇಕು ಎಂದಿದ್ದಾರೆ. ನಾಳೆಯೇ ಆಗಬೇಕು ಅಂತ ಹೇಳಿಲ್ಲ ಎಂದರು.

ಸಚಿವ ಸಂಪುಟ ಮರು ರಚನೆ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ಕೇಳಬೇಕು. ನಾನು ಆಕಾಂಕ್ಷಿ ಇದ್ದೀನಿ ಅಷ್ಟೇ, ಯಾವಾಗ ಆಗುತ್ತೆ ಎಂಬ ಬಗ್ಗೆ ನನ್ನ ಬಳಿ ಉತ್ತರ ಇಲ್ಲ. ಶೀಘ್ರದಲ್ಲೇ ಆಗಲಿ ಅಂತ ಆಸೆ ಪಡ್ತೀನಿ ಎಂದರು.

ಕುದೂರು ಬಿಡಿಸಿಸಿ ಬ್ಯಾಂಕ್‌ನ ಚಿನ್ನಾಭರಣದ ಬಗ್ಗೆ ಅವ್ಯವಹಾರ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ, ಸಂಸದ ಡಾ.ಸಿ.ಎನ್.ಮಂಜುನಾಥ್ ಕೇಂದ್ರದ ಸಚಿವ ಅಮಿತ್ ಷಾ ಅವರಿಂದ ಸಿಬಿಐ ತನಿಖೆ ಮಾಡಿಸಲಿ, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ 600 ಕೋಟಿ ರೂ . ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ಕಾಲ ಕಳೆದರು. ಈಗಲೂ ನಮ್ಮಮೇಲೆ ಆರೋಪ ಮಾಡಲು ಏನೂ ಸಿಕ್ಕಿಲ್ಲ, ಈ ಆರೋಪಮಾಡಿದ್ದಾರೆ. ಚರ್ಚೆಗೆ ಸಿದ್ಧನಿದ್ದೇನೆ, ಪ್ರಮಾಣಕ್ಕೂ ಸಿದ್ಧ. ಬಾಲಿಶ ಹೇಳಿಕೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ನನ್ನ ಸಹೋದರನ ಖಾತೆಗೆ ಕೆ.ಕೃಷ್ಣಮೂರ್ತಿ ಪತ್ನಿ ಅನಸೂಯಮ್ಮ ಖಾತೆಯಿಂದ 10 ಲಕ್ಷ ರೂ. ವರ್ಗಾವಣೆಯಾಗಿರುವುದು ಉದ್ಯಮ ಪ್ರಾರಂಭಿಸಲು. ಇದು 8 ವರ್ಷದ ಹಿಂದೆ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ವಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net