ಜಿಲ್ಲಾ ಬಿಜೆಪಿಯಲ್ಲಿ ಭಿನ್ನರಾಗ, ಪರಸ್ಪರ ಸಿಡಿಮಿಡಿ

Published on

ಚಿಕ್ಕಬಳ್ಳಾಪುರ: ಜಿಲ್ಲಾ ಬಿಜೆಪಿಯಲ್ಲಿನ ಬಹಿರಂಗ ಭಿನ್ನಮತದ ಹೇಳಿಕೆಗಳ ನಡುವೆ ನಾಯಕರ ನಡೆ ನುಡಿಯು ಚರ್ಚೆಗೆಗ್ರಾಸವಾಗುತ್ತಿದೆ.

ಇತ್ತೀಚೆಗೆ ನೂತನ ಜಿಲ್ಲಾಧ್ಯಕ್ಷರ ನೇಮಕದ ವಿಚಾರದಲ್ಲಿ ಮೂಲ ಹಾಗೂ ವಲಸಿಗ ಬಿಜೆಪಿಗರ ನಡುವೆ ವಾಗ್ವಾದ ನಡೆಯುತ್ತಿದೆ. ಇದರ ನಡುವೆ ಸಂಸದ ಡಾ ಕೆ.ಸುಧಾಕರ್ರೊಂದಿಗೆ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬುದು ಜಿಲ್ಲೆಯಲ್ಲಿ ರಾಜಕೀಯವಾಗಿ ಚರ್ಚೆಯಾಗುತ್ತಿದೆ. ಅದರಲ್ಲೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಪಕ್ಷ ಸೇರ್ಪಡೆ ಖಾತ್ರಿಯ ಬಗ್ಗೆ ಸ್ಪಷ್ಟನೆ ನೀಡುವ ಹೇಳಿಕೆಯು ರಾಜಕೀಯ ಹೊಸ ಬೆಳವಣಿಗೆಯ ಮಾತುಗಳಿಗೆ ಪುಷ್ಠಿ ನೀಡಿದೆ. ಸ್ವತಃ ಸಂಸದ ಡಾ ಕೆ.ಸುಧಾಕರ್ ಪಕ್ಷದ ತ್ಯಾಗದ ವಿಚಾರವನ್ನು ಅಲ್ಲಗಳೆದಿದ್ದು ಜಿಲ್ಲೆಯಲ್ಲಿ ಮತ್ತಷ್ಟು ಪ್ರಬಲವಾಗಿ ಬಿಜೆಪಿಯನ್ನು ಸಂಟಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಆಯಾ ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಹೆಸರುವಾಸಿಯಾಗಿರುವ ಸಂಸದರ ನಡೆಯು ಸದಾ ಕುತೂಹಲಕಾರಿಯಾಗಿಯೇ ಇರುತ್ತದೆ. ಕಳೆದ 2019 ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ನಿ0ದ ಬಿಜೆಪಿಗೆ ಜಿಗಿದ್ದಿದ್ದರು.

*ಕೈನತ್ತ ಜಿಗಿಯುತ್ತಾರೆ

2024 ಲೋಕಸಭಾ ಚುನಾವಣಾ ಪೂರ್ವದಿಂದಲೂ ಸುಧಾಕರ್ ವಿರುದ್ಧ ಕಿಡಿಕಾರುತ್ತಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಅವರು ಬೇಕಾಗಿದ್ದಲ್ಲಿ ಪಕ್ಷವನ್ನು ಬಿಟ್ಟು ಹೋಗಲಿ ಎಂದೇಳಿದ್ದಾರೆ. ಹಾಗೆಯೇ ಚುನಾವಣೆಗೆ ಟಿಕೆಟ್ ಸಿಗದಿರುವ ಆತಂಕದಲ್ಲಿ ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ ನಾಯಕರೊಂದಿಗೆ ರಹಸ್ಯವಾಗಿ ಪಕ್ಷ ಸೇರ್ಪಡೆಯಾಗುವುದರ ಬಗ್ಗೆ ಚರ್ಚಿಸಿದ ವಿಚಾರ ಬಗ್ಗೆ ಎಲ್ಲವನ್ನೂ ಹೇಳಬೇಕಾ? ಎಂತಲೂ ಪ್ರಶ್ನಿಸಿದ್ದಾರೆ. ಇದರ ನಡುವೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವರು ಸಂಸದರ ವಿರುದ್ಧ ಕಿಡಿಕಾರಿದ್ದಾರೆ.

*ಸ್ವಪಕ್ಷೀಯರ ವಿರುದ್ಧ ಟೀಕೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಸ್ವಪಯ ನಾಯಕರ ನಡೆ ನುಡಿ, ರಾಜಕೀಯ ಬೆಳವಣಿಗೆಗಳ ಬಗೆಗಿನ ಅಸಮಾಧಾನಗೊಂಡರೂ ಬಹಿರಂಗ ಹೇಳಿಕೆ ನೀಡದ ಸಂಸದರು, ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಎಲ್ಲವನ್ನೂ ಸಹಿಸಲು ಸಾಧ್ಯವಿಲ್ಲ. ಯುದ್ದ ಮಾಡುತ್ತೇನೆ ಎಂತಲೂ ಹೇಳಿದ್ದಾರೆ. ಹಾಗೆಯೇ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net