ಬಸ್ ನಿಲ್ದಾಣ ಸ್ಥಳಾಂತರದಿಂದ ಅನನುಕೂಲ: ಯಥಾಸ್ಥಿತಿ ಕಾಪಾಡುವಂತೆ ಮೈಸೂರು ಕೆಎಸ್‌ಆರ್‌ಟಿಸಿ ಸಬರ್ಬನ್ ಬಸ್ ನಿಲ್ದಾಣ ಉಳಿಸಿ ಹೋರಾಟ ಸಮಿತಿ ಆಗ್ರಹ

Published on

ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸುವುದರಿಂದ ಜನರಿಗೆ ಅನುಕೂಲದ ಬದಲು ಅನನುಕೂಲವೇ ಆಗುತ್ತದೆ. ಆದ್ದರಿಂದ ಯಥಾಸ್ಥಿತಿ ಕಾಪಾಡುವಂತೆ ಮೈಸೂರು ಕೆಎಸ್‌ಆರ್‌ಟಿಸಿ ಸಬರ್ಬನ್ ಬಸ್ ನಿಲ್ದಾಣ ಉಳಿಸಿ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ಬಸ್ ನಿಲ್ದಾಣ ಸ್ಥಳಾಂತರದಿಂದ ಸುತ್ತಮುತ್ತಲಿರುವ ಹೋಟೆಲ್ ಉದ್ದಿಮೆ, ವರ್ತಕರು, ಪ್ರಮುಖವಾಗಿ ಪ್ರವಾಸಿಗಳು ಹಾಗೂ ನಗರದ ಜನತೆಗೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಈ ನಿರ್ಧಾರ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರುವುದಾಗಿ ಸಮಿತಿ ಸಂಚಾಲಕರೂ ಅದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗ ಇರುವ ಗ್ರಾಮಾಂತರ ಬಸ್ ನಿಲ್ದಾಣ ಸರ್ಕಾರಿ ಅತಿಥಿ ಗೃಹ, ತಾಲೂಕು ಕಚೇರಿ, ಎಸ್‌ಪಿ ಕಚೇರಿ, ಪೊಲೀಸ್ ಕಮಿಷನರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮೃಗಾಲಯ, ಅರಮನೆ, ವಿಶ್ವವಿದ್ಯಾಲಯ, ದೇವರಾಜ ಮಾರುಕಟ್ಟೆ, ಜಗನ್ಮೋಹನ ಅರಮನೆ, ರೈಲು ನಿಲ್ದಾಣ ಸೇರಿದಂತೆ ವಿವಿಧ ಕಡೆ ತೆರಳಲು ಹತ್ತಿರದಲ್ಲಿದೆ ಎಂದರು.

ಅಲ್ಲದೆ ಹಲವು ಶಾಲೆ, ಕಾಲೇಜುಗಳಿಗೆ ಹತ್ತಿರದಲ್ಲಿದೆ. ಒಂದು ವೇಳೆ ಇದನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಿದಲ್ಲಿ ಈ ಎಲ್ಲ ಸ್ಥಳಗಳಿಗೂ ಹೋಗಿ ಬರುವುದು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಕಷ್ಟಕರವಾಗಲಿದೆ ಎಂದರು.

17 ವರ್ಷದ ಹಿಂದೆ ನರ್ಮ್ ಯೋಜನೆಯಡಿ ಈ ಬಸ್ ನಿಲ್ದಾಣ ಮಾತ್ರವಲ್ಲದೆ, ಸಾತಗಳ್ಳಿ, ನಾಯ್ಡು ನಗರ, ಕುವೆಂಪು ನಗರ, ಇಲವಾಲಗಳಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದರೂ ಇವುಗಳು ಪೂರ್ಣ ಬಳಕೆ ಆಗುತ್ತಿಲ್ಲ. ಒಂದು ವೇಳೆ ನಗರ ಗ್ರಾಮಾಂತರ ಬಸ್ ನಿಲ್ದಾಣದ ಮೇಲೆ ಈಗ ಒತ್ತಡ ಬೀಳುತ್ತಿದೆ ಎಂದಾದರೆ ಈ ಬಸ್ ನಿಲ್ದಾಣಗಳಿಂದಲೇ ದೂರದ ಊರುಗಳಿಗೂ ಬಸ್ ಹೊರಡುವಂತೆ ಮಾಡಿದರೆ ಆ ಭಾಗದವರು ಅಲ್ಲಿಂದಲೇ ಪ್ರಯಾಣಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಅಲ್ಲದೆ ಸರ್ಕಾರಿ ಅತಿಥಿಗೃಹ ಇಲ್ಲವೇ ಪೀಪಲ್ಸ್ ಪಾರ್ಕ್‌ನಲ್ಲಿ ಸ್ವಲ್ಪ ಮಟ್ಟಿಗೆ ಪ್ರದೇಶ ಪಡೆದು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ತಾವು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದು, ಅವರು ನೀಡಿರುವ ಭರವಸೆ ಮೇಲೆ ತಮಗೆ ವಿಶ್ವಾಸವಿದೆ ಎಂದು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಕೆ.ಬಿ.ಲಿಂಗರಾಜು, ಬಿ.ಎಸ್.ಪ್ರಶಾಂತ್, ಡಿ.ಶ್ರೀಹರಿ, ರವಿಕುಮಾರ್, ಸಿ.ಎ.ಜಯಕುಮಾರ್, ಮಹೇಶ್ ಕಾಮತ್, ರವಿಶಾಸ್ತ್ರಿ, ಎಸ್.ಜೆ.ಅಶೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net