ಮಾಸಾಶನಕ್ಕಾಗಿ ಅಂಗವಿಕಲರ ಪ್ರತಿಭಟನೆ, 8 ತಿಂಗಳಿಂದ ಪಾವತಿಯಾಗದ ಭತ್ಯೆ, ಆಧಾರ್ ಅಪ್ಡೇಟ್ ಮಾಡಿಸಿದರೂ ಬಾರದ ಹಣ

30ank news and photos 02
Published on

ಆನೇಕಲ್: ಕೋವಿಡ್ ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಅಂಗವಿಕಲರ ಮಾಸಾಶನ ಪಾವತಿಯಲ್ಲಿ ವ್ಯತ್ಯಯವಾಗಿದೆ. 8 ತಿಂಗಳಿಂದ ಮಾಸಾಶನ ಬಾರದೆ ಅಂಗವಿಕಲರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ಆನೇಕಲ್ ತಾಲೂಕಿನ ಚೂಡಸಂದ್ರದಲ್ಲಿ ಅಂಗವಿಕಲರು ಭಾನುವಾರ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಾಸಾಶನ ಬಾರದೆ ಅಂಗವಿಕಲರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ತಕ್ಷಣವೇ ಮಾಸಾಶನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಆಶ್ರಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಜಿನಪ್ಪ ಮಾತನಾಡಿ, ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡಿರುವ ಅಂಗವಿಕಲರು, ಸರ್ಕಾರದಿಂದ ಬರುವ ಮಾಸಾಶನವನ್ನೇ ಅವಲಂಬಿಸಿದ್ದಾರೆ. ಜನವರಿಯಿಂದ ಮಾಸಾಶನ ಬಾರದಿರುವ ಬಗ್ಗೆ ಪ್ರಶ್ನಿಸಿದರೆ, ಆಧಾರ್‌ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಿಸುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಿವರಗಳನ್ನು ಅಪ್ಡೇಟ್ ಮಾಡಿಸಿದರೂ, ಬ್ಯಾಂಕ್ ಖಾತೆಗಳಿಗೆ ಹಣ ಬಂದಿಲ್ಲ. ಹಾಗಾಗಿ ಪ್ರತಿಭಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಅಂಗವಿಕಲೆ ಟಿ.ಎಚ್. ವಿಜಯಕುಮಾರಿ ಮಾತನಾಡಿ, ಅಂಗವಿಕಲರ ಮಾಸಾಶನಕ್ಕೂ ಸರ್ಕಾರ ಕತ್ತರಿ ಪ್ರಯೋಗಿಸಿರುವುದು ದುರದೃಷ್ಟಕರ ಸಂಗತಿ. ಇನ್ನಾದರೂ ಸಂಬಂಧಪಟ್ಟ ಸಚಿವರು ಇತ್ತ ಗಮನಹರಿಸಬೇಕು ಎಂದರು.

ಆಶ್ರಯ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಎಚ್.ಎನ್. ಸುಭ್ರಮಣಿ, ಹೋರಾಟಗಾರ್ತಿ ಸೀತಮ್ಮ ಮತ್ತಿತರರಿದ್ದರು.

ಅಂಗವಿಕಲರ ಭೂಮಿ ಒತ್ತುವರಿ: ಆನೇಕಲ್ ತಾಲೂಕಿನ ಗಟ್ಟಹಳ್ಳಿ ಬಳಿ ಸರ್ವೇ ನಂ.132ರಲ್ಲಿ ಅಂಗವಿಕಲರಿಗೆ ಎಂದು ಸರ್ಕಾರ 32 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಆದರೆ, ಈಗ ಈ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಈ ಭೂಮಿ ವಶಕ್ಕೆ ಪಡೆದು, ಅಂಗವಿಕಲರಿಗೆ ಸೂರು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಆಶ್ರಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಟಿ.ಎನ್. ಲಕ್ಷ್ಮೀಪತಿ ಆಗ್ರಹಿಸಿದರು.

ರಾಜ್ಯದ 15 ಲಕ್ಷಕ್ಕೂ ಹೆಚ್ಚು ಅಂಗವಿಕಲರಿಗೆ ಸಮಸ್ಯೆಯಾಗಿದೆ. ಕೆಲವೇ ಮಂದಿಗೆ ಮಾಸಾಶನ ಬಿಡುಗಡೆ ಮಾಡಿದ್ದು, ಇನ್ನುಳಿದವರಿಗೆ ಕೊಡದೆ ಸತಾಯಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತರಿಗೆ ಈ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ. ಟಿ.ಎನ್. ಲಕ್ಷ್ಮೀಪತಿ ಆಶ್ರಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net