ಅಂಗವಿಕಲರ ಸೌಲಭ್ಯಕ್ಕೆ ಆದಾಯ ಮಿತಿ ಅಡ್ಡಿ

disabled
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಅಂಗವಿಕಲರ ಕಲ್ಯಾಣ ಉದ್ದೇಶದಿಂದ ಸರ್ಕಾರವೇ ಜಾರಿಗೊಳಿಸಿದ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಅಡ್ಡಿಯಾಗಿರುವುದು ಸರ್ಕಾರವೇ ರೂಪಿಸಿದ ಆದಾಯ ಮಿತಿ ನೀತಿ!

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಯ ಬಹುತೇಕ ಸೌಲಭ್ಯ ಪಡೆಯಲು ಫಲಾನುಭವಿ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದಲ್ಲಿ 11,500 ರೂ. ಹಾಗೂ ನಗರವಾಸಿಯಾಗಿದ್ದಲ್ಲಿ 24,000 ರೂ. ಇರಬೇಕು.

ಈ ನಿಯಮಾವಳಿಯನ್ನು ಪಾಲಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದೇ ಒಂದು ಫಲಾನುಭವಿ ಕುಟುಂಬವನ್ನು ಗುರುತಿಸುವುದು ಕಷ್ಟ. ನರೇಗಾ ಕೂಲಿಯನ್ನೇ ಅವಲಂಬಿಸಿರುವ ಕುಟುಂಬಕ್ಕೂ ಸೌಲಭ್ಯ ಪಡೆಯುವುದು ಅಸಾಧ್ಯ. ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಾರ್ಡ್ ಪಡೆದ ಎಲ್ಲ ಕುಟುಂಬಗಳಿಗೆ ವಾರ್ಷಿಕ 100 ದಿನ ಉದ್ಯೋಗ ಪಡೆಯಬಹುದು. ಉದ್ಯೋಗ ಖಾತರಿ ಯೋಜನೆತಯಲ್ಲಿ ದಿನಕ್ಕೆ 275 ರೂ ಕೂಲಿ ನಿಗದಿಪಡಿಸಲಾಗಿದೆ. ಅಂದರೆ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ಉದ್ಯೋಗ ಖಾತರಿಯಲ್ಲೇ 27,500 ರೂ. ಆದಾಯ ದೊರೆಯುತ್ತದೆ.

ಶೇ.40ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 500 ರೂ. ಮಾಸಾಶನ ಪಡೆಯಲು ಅರ್ಹರಾಗಿರುತ್ತಾರೆ. ಶೇ.75ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವೈಕಲ್ಯತೆಯುಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 1,200 ರೂ. ಮಾಸಾಶನ ಪಡೆಯಲು ಅರ್ಹರಾಗಿರುತ್ತಾರೆ. ಅಂದರೆ ಇತರ ಯಾವುದೇ ಆದಾಯ ಮೂಲಗಳು ಇಲ್ಲದೆ 1200 ರೂ. ಮಾಸಾಶನ (ವಾರ್ಷಿಕ 14,400 ರೂ.) ಪಡೆಯುವ ವ್ಯಕ್ತಿಗಳು ಕೂಡ ಇಲಾಖೆ ಯೋಜನೆಯ ಇತರ ಸೌಲಭ್ಯ ಪಡೆಯಲು ಅನರ್ಹರು.

ಪ್ರಸ್ತುತ ಇರುವ ಆದಾಯ ಮಿತಿಯಲ್ಲಿ ಇಲಾಖೆ ಯೋಜನೆ ಫಲಾನುಭವಿಗಳನ್ನು ಗುರುತಿಸುವುದು ಕಷ್ಟವಾಗಿದೆ. ಬಿಪಿಎಲ್ ಆದಾಯ ಮಿತಿ ನಿಗದಿಪಡಿಸಿದ್ದರೂ ಫಲಾನುಭವಿಗಳನ್ನು ಗುರುತಿಸಬಹುದು. ಆದ್ದರಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲು ಇರುವ ಆದಾಯ ಮಿತಿ ಏರಿಸಬೇಕು ಎಂದು ಎಲ್ಲ ಜಿಲ್ಲೆಗಳು ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆದಿವೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಅಂಗವಿಕಲರ ಕಲ್ಯಾಣ ಅಧಿಕಾರಿ ಯಮುನಾ ಹೇಳುತ್ತಾರೆ.

ಇಲಾಖೆ ಸೌಲಭ್ಯ ಪಡೆಯಲು ನಿಗದಿಪಡಿಸಿರುವ ಆದಾಯ ಮಿತಿಯಲ್ಲಿ ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿ ಓರ್ವ ಫಲಾನುಭವಿಯನ್ನು ಗುರುತಿಸುವುದು ಕೂಡ ಕಷ್ಟ. ಅಂಗವಿಕಲರಿಗೆ ಒದಗಿಸುವ ಸೌಲಭ್ಯಗಳಿಗೆ ಆದಾಯ ಮಿತಿಯನ್ನೇ ನಿಗದಿಪಡಿಸಬಾರದು. ಸಾಮಾಜಿಕ ನ್ಯಾಯದಡಿ ಬರುವ ದುರ್ಬಲ ವರ್ಗದ ಈ ಸಮುದಾಯದ ಜನರಿಗೆ ವಿಶೇಷ ಸ್ಥಾನಮಾನ, ಅವಕಾಶಗಳನ್ನು ಒದಗಿಸಬೇಕು.

- ಎಸ್.ಎಲ್.ರಾಥೋಡ್, ದ.ಕ. ಜಿಲ್ಲಾ ಅಧ್ಯಕ್ಷ, ಸರ್ಕಾರಿ- ಅರೆ ಸರ್ಕಾರಿ ವಿಕಲ ಚೇತನ ನೌಕರರ ಸಂಘ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net