

ಮೈಸೂರು: ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಯಾವುದೇ ವಿಭಾಗದಲ್ಲಿಯೂ ಕಡಿಮೆ ಇರುವುದಿಲ್ಲ. ಅವರ ಪ್ರತಿಭೆಯನ್ನು ಪ್ರೋತ್ಸಾಹಿ ಹೊರತರಲು ಅವರನ್ನು ಪಾಲಕರು ಹಾಗೂ ಶಿಕ್ಷಕರು ಸಹಾನುಭೂತಿಯಿಂದ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಮಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ, ಸಂಘಗಳ, ವೇದಿಕೆಗಳ, ಒಕ್ಕೂಟಗಳ ಸಹಯೋಗದೊಂದಿಗೆ ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದಲ್ಲಿ ಎಲ್ಲ ದೇಶಗಳಲ್ಲಿಯೂ ಎಲ್ಲ ಸ್ಥಳಗಳಲ್ಲಿಯೂ ಅಂಗವಿಕಲ ವ್ಯಕ್ತಿಗಳಿದ್ದಾರೆ. ಅಂತಹ ವ್ಯಕ್ತಿಗಳ ಪ್ರತಿಭೆ ಹಾಗೂ ಸಾಧನೆಗಳನ್ನು ಅನಾವರಣಗೊಳಿಸಲು ಮತ್ತು ಜನಸಾಮಾನ್ಯರಿಗೆ ತಿಳಿಸಲು ಆಚರಿಸುವಂತಹ ಸರ್ವಕಾಲಿಕ ಹಬ್ಬವೇ ಅಂಗವಿಕಲರ ದಿನಾಚರಣೆ. ಅಂಗವಿಕಲರು ಮತ್ತು ಸಾಮಾನ್ಯರಿಗೆ ಬಹಳ ವ್ಯತ್ಯಾಸವಿರುವುದಿಲ್ಲ. ಅವರಿಗೆ ಅವಕಾಶಗಳು ಕಡಿಮೆ. ಹಾಗಾಗಿ ನಾವು ಅವರಿಗೆ ಹೆಚ್ಚಿನ ಅವಕಾಶ, ಪ್ರೋತ್ಸಾಹವನ್ನು ನೀಡಿದರೆ ಅವರು ಸಮಾಜದ ಮುಖ್ಯವಾಹಿನಿಗೆ ಬಂದು ನಮ್ಮಂತೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ಹೇಳಿದರು.
ನಮ್ಮಲ್ಲಿರುವ ನ್ಯೂನ್ಯತೆಗಳ ಬಗ್ಗೆ ಯೋಚಿಸದೆ ಪ್ರತಿಯೊಬ್ಬರೂ ಆತ್ಮ ವಿಶ್ವಾಸದಿಂದ ಮುನ್ನುಗ್ಗಿದರೆ ಸಾಧನೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮಲಿರುವ ಪ್ರತಿಭೆಯನ್ನು ಅರಿತುಕೊಂಡು ಯಾವುದಾದರೂ ಒಂದು ಒಳ್ಳೆ ಮಾರ್ಗದಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಮಹಾರಾಣಿ ಕಾಲೇಜಿನ ಕನ್ನಡ ಸಹಾಯಕ ಪ್ರಧ್ಯಾಪಕ ನಾಗರಾಜು ಮಾತನಾಡಿ, 1990ರ ದಶಕದಲ್ಲಿ ವಿಶ್ವಸಂಸ್ಥೆಯು ನಮಗಾಗಿ ನಮ್ಮಲ್ಲಿರುವ ಪ್ರತಿಭೆ, ಬದುಕು ಹಾಗೂ ಸಾಧನೆಗಳನ್ನು ಪ್ರಪಂಚಕ್ಕೆ ತಿಳಿಸಲು ಪ್ರತಿವರ್ಷ ವಿಶ್ವ ಅಂಗವಿಕಲರ ದಿನ ಆಚರಣೆ ಜಾರಿಗೆ ತಂದಿತು. ಸರ್ಕಾರವು ನಮಗೆ ನೀಡಿರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ನಮ್ಮ ನ್ಯೂನ್ಯತೆಗಳನ್ನು ಮರೆತು ಸಾಧಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಇಂದು ಸಮಾಜದಲ್ಲಿ ನಮಗೆ ಅವಕಾಶಗಳು ಹೇರಳವಾಗಿವೆ. ನಮಗಾಗಿ ಶ್ರಮಿಸುವ ಹಲವಾರು ಸಂಘ-ಸಂಸ್ಥೆಗಳಿವೆ, ನಮಗಾಗಿ ಯೇ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಹಾಗಾಗಿ ನಾವು ಸಮಾಜವನ್ನು ದೂಷಿಸದೆ ಅವುಗಳನ್ನು ಮೊದಲು ಅರಿತುಕೊಂಡು ನಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಬ್ರೈಲ್ ಮುದ್ರಣಾಲಯದಿಂದ ತಯಾರಿಸಲಾಗಿದ್ದಂತಹ 2025ನೇ ಸಾಲಿನ ಬ್ರೈಲ್ ಕ್ಯಾಲೆಂಡರ್‌ಅನ್ನು ಹಾಗೂ ಮಹಾರಾಣಿ ಕಾಲೇಜಿನ ಕನ್ನಡ ಸಹಾಯಕ ಪ್ರಧ್ಯಾಪಕ ನಾಗರಾಜು ರಚನೆಯ ‘ಗುರುವೇ ನಮನ’ ಕೃತಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ದೃಶ್ಯ ದೋಷವುಳ್ಳ ಮಕ್ಕಳ ಅಧಿಕ್ಷಕ ಸತೀಶ್, ಶ್ರವಣ ದೋಷವುಳ್ಳ ಮಕ್ಕಳ ಪಾಠಶಾಲೆಯ ಅಧಿಕ್ಷಕ ಉದಯ್ ಶಂಕರ್, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳೆ ಮತ್ತು ಮಕ್ಕಳ ಸಂರಕ್ಷಣಾ ಜಿಲ್ಲಾ ಅಧಿಕಾರಿ ಉಷಾ, ಛಾಯಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಘುನಾಥ್ ಗೌಡ, ಸ್ವಾಮಿವಿವೇಕನಂದ ಯೂತ್ಸ್ ಮೂವ್‌ಮೆಂಟ್ ನಿರ್ದೇಶಕ ರಮೇಶ್, ಶ್ರವಣ ದೂಷವುಳ್ಳ ಒಕ್ಕೂಟದ ಅಧ್ಯಕ್ಷ ಶ್ರೀಧರ, ಸಜ್ಜನ ಸಂಸ್ಥೆಯ ಕಾರ್ಯದರ್ಶಿ ಕುಮಾರ್, ಸರ್ಕಾರಿ ಪ್ರಯಾಗ್ ಮುದ್ರಣಾಲಯದ ವ್ಯವಸ್ಥಾಪಕ ಜಿ.ಮೋಹನ್ ಹಾಗೂ ಇತರರು ಇದ್ದರು.