ಅಂಗವಿಕಲರೂ ಸ್ವಾವಲಂಬಿ ಜೀವನ ನಡೆಸಲಿ

19 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾಮಾನ್ಯ ಜನರಂತೆ ಅಂಗವಿಕಲರೂ ಸ್ವಾವಲಂಬಿ ಜೀವನ ಸಾಗಿಸಿ ಸಾಧನೆ ಮಾಡಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅಂಗವಿಕಲರಿಗೆ ಸಕಲ ಸೌಲಭ್ಯ ನೀಡುತ್ತಿದೆ. ಶಿಬಿರಗಳ ಮೂಲಕ ಅವರ ಜೀವನಕ್ಕೆ ಆಧಾರವಾಗುವ ಪರಿಕರಗಳನ್ನು ವಿತರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತ ಸರ್ಕಾರದ ಅಡಿಪ್​ ಯೋಜನೆ ಅಡಿ ದಿವ್ಯಾಂಗ ಜನರಿಗೆ ಸಾಮಾಜಿಕ ಅಧಿಕಾರಿತ ಶಿವಿರ್​ ಹಾಗೂ ರಾಷ್ಟ್ರೀಯ ವಯೋಶ್ರಿ ಯೋಜನೆ ಅಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆ ವಿತರಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿರುವ ಅಲಿಮ್ಕೋ ಕಂಪನಿ ಅನುದಾನದ ಕೊರತೆಯಿಂದ ಬಂದಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದ ಬಳಿಕ ಕಂಪನಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಕಂಪನಿ ಮೂಲಕ ದೇಶಾದ್ಯಂತ ಸಲಕರಣೆ ವಿತರಿಸಲಾಗುತ್ತಿದೆ ಎಂದರು.

ಶಿಬಿರದ ಮೂಲಕ 1.90 ಕೋಟಿ ರೂ. ಮೌಲ್ಯದ ವಿವಿಧ ಸಕಲಕರಣೆಗಳನ್ನು 1627 ಜನರಿಗೆ ವಿತರಿಸಲಾಗುತ್ತಿದೆ. ಈ ಮೊದಲು ಶೇ. 70ರಷ್ಟು ಅಂಗವೈಕಲ್ಯ ಹೊಂದಿದವರಿಗೆ ಮಾತ್ರ ಪರಿಕರಗಳನ್ನು ನೀಡಲಾಗುತ್ತಿತ್ತು. ಇದೀಗ ಆ ಪ್ರಮಾಣವನ್ನು ಶೇ. 40ಕ್ಕೆ ಇಳಿಸಲಾಗಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಅಲಿಮ್ಕೋ ಕಂಪನಿ ಕೇಂದ್ರವನ್ನು ಹುಬ್ಬಳ್ಳಿ ಕಿಮ್ಸ್​ನಲ್ಲಿ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಅಗತ್ಯ ಸಹಾಯಕ ಉಪಕರಣವನ್ನು ಉಚಿತವಾಗಿ ಪಡೆಯಬಹುದು ಎಂದರು.

ಕೇಂದ್ರದ ರಾಜ್ಯ ಖಾತೆ ಸಚಿವ ಬನವಾರಿ ಲಾಲ್​ ವರ್ಮಾ ಮಾತನಾಡಿ, ಅಂಗವಿಕಲರ ಜೀವನಕ್ಕೆ ಅಗತ್ಯವಿರುವ ಎಲ್ಲ ಸಹಕಾರ, ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಉದ್ಯೋಗದಲ್ಲಿ ಶೇ. 3ರ ಬದಲಾಗಿ ಶೇ. 4ರಷ್ಟು ಮೀಸಲಾತಿ ನೀಡುತ್ತಿದ್ದು, ಸರ್ಕಾರದ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಶೇ.5ರಷ್ಟು ಹೆಚ್ಚಿಸಲಾಗಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಆಯುಕ್ತ ದಾಸ ಸೂರ್ಯವಂಶಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ವಿಜಯಾನಂದ ಶೆಟ್ಟಿ, ಚಂದ್ರಶೇಖರ ಮನಗುಂಡಿ, ಆನಂದ ಯಾವಗಲ್​, ಮುಖಂಡರಾದ ಸಂಜಯ ಕಪಟಕರ, ಪ್ರಕಾಶ ಕ್ಯಾರಕಟ್ಟಿ, ಮೋಹನ ರಾಮದುರ್ಗ, ಜನಪ್ರತಿನಿಧಿಗಳು, ಜಿಲ್ಲೆಯ ಅಧಿಕಾರಿಗಳು, ಅಂಗವಿಕಲರು, ಹಿರಿಯರು, ಇತರರು ಇದ್ದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಅಲಿಮ್ಕೋ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಅಜೇಯ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಎಚ್​.ಎಚ್​.ಕುಕನೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net