ಅಂಗವಿಕಲರಿಗೆ ಆಸರೆಯಾಗುವ ಕ್ರಿಯಾಯೋಜನೆ

DAVANAGERE HANDICAP
Published on

ದಾವಣಗೆರೆ: ಅಂಗವಿಕಲರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಅನುದಾನಕ್ಕೇನೂ ಕೊರತೆಯಿಲ್ಲ. ಅರ್ಹರನ್ನು ಗುರುತಿಸಿ ಅವರ ಅಗತ್ಯಕ್ಕೆ ಸ್ಪಂದಿಸುವ ಆಸಕ್ತಿ ಇದ್ದರೆ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದು ಎಂಬುದಕ್ಕೆ ಜಿಲ್ಲೆಯ ಕ್ರಿಯಾಯೋಜನೆ ಮಾದರಿಯಾಗಿದೆ.

ಸಾಮಾನ್ಯವಾಗಿ ಅಂಗವಿಕಲರಿಗೆ ಪ್ರತಿ ವರ್ಷವೂ ತ್ರಿಚಕ್ರ ವಾಹನಗಳನ್ನು ವಿತರಿಸುವ ಸಂಪ್ರದಾಯ ಬೆಳೆದು ಬಂದಿತ್ತು. ಅಗತ್ಯವಿದೆಯೋ, ಇಲ್ಲವೋ ಎಲ್ಲರಿಗೂ ಅವುಗಳನ್ನೇ ನೀಡಲಾಗುತ್ತಿತ್ತು. ಈ ಬಾರಿ ವಿಭಿನ್ನ ಪ್ರಯತ್ನ ನಡೆದಿದ್ದು ಎಲ್ಲ ಬಗೆಯ ಅಂಗವಿಕಲರನ್ನೂ ತಲುಪುವ ಉದ್ದೇಶ ಹೊಂದಲಾಗಿದೆ.

ಜಿಲ್ಲೆಯಲ್ಲಿ 16090 ದೈಹಿಕ ಅಂಗವಿಕಲರು, 2292 ದೃಷ್ಟಿದೋಷ ಉಳ್ಳವರು, 2747 ವಾಕ್ ಮತ್ತು ಶ್ರವಣ ದೋಷವುಳ್ಳವರು, 2861 ಬುದ್ಧಿಮಾಂದ್ಯರು, 54 ಜನ ಕುಷ್ಠರೋಗ ನಿವಾರಿತರು, 531 ಬಹುವಿಧ ಅಂಗವಿಕಲತೆ ಉಳ್ಳವರು, 357 ಜನ ಮಾನಸಿಕ ಅಸ್ವಸ್ಥರನ್ನು ಒಳಗೊಂಡು ಒಟ್ಟಾರೆ 24,932 ಅಂಗವಿಕಲರಿದ್ದಾರೆ.

ಜಿಲ್ಲಾ ಪಂಚಾಯಿತಿ ಶೇ.5 ಅನಿರ್ಬಂಧಿತ ಅನುದಾನದಲ್ಲಿ 27 ಲಕ್ಷ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ದೊರಕಿದ್ದು ಮಾ. 31ರ ಒಳಗಾಗಿ ಫಲಾನುಭವಿಗಳ ಆಯ್ಕೆ ಮಾಡಬೇಕಿದೆ. ವಿಕಲತೆವಾರು ವೈಯಕ್ತಿಕ ಸೌಲಭ್ಯಗಳನ್ನು ಒದಗಿಸಲು ಯೋಜನೆ ಸಿದ್ಧಪಡಿಸಲಾಗಿದೆ.

ಕ್ರಿಯಾ ಯೋಜನೆಯಲ್ಲಿ ಏನಿದೆ?: ಬುದ್ಧಿಮಾಂದ್ಯ ಮತ್ತು ಬಹುವಿಧ ಅಂಗವಿಕಲತೆ ಉಳ್ಳವರಿಗೆ ಎಂ.ಆರ್.ಕಿಟ್, ಅಂಧ ವಿದ್ಯಾರ್ಥಿಗಳಿಗೆ ಆರ್ಬಿಟ್ ರೀಡರ್, ಬ್ರೈಲರ್ ಸೌಲಭ್ಯ ನೀಡುವ ಉದ್ದೇಶವಿದೆ.
ಸ್ವಯಂ ಉದ್ಯೋಗ ಕೈಗೊಳ್ಳುವ ದೃಷ್ಟಿದೋಷವುಳ್ಳ ಯುವಕ, ಯುವತಿಯರಿಗೆ ಸಂಗೀತ ವಾದ್ಯಗಳಾದ ಶೃತಿ ಪೆಟ್ಟಿಗೆ, ಕೀಬೋರ್ಡ್, ತಬಲ ನೀಡಲು ಅವಕಾಶ ಮಾಡಿಕೊಳ್ಳಲಾಗಿದೆ.
ವಾಕ್ ಮತ್ತು ಶ್ರವಣ ದೋಷವುಳ್ಳವರಿಗೆ ಜೆರಾಕ್ಸ್ ಯಂತ್ರ, ಪ್ರೋಗ್ರಾಮಬಲ್ ಶ್ರವಣ ಸಾಧನ, ಸಂವಹನಕ್ಕಾಗಿ ಮೊಬೈಲ್ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸಲಾಗಿದೆ.
ದೈಹಿಕ ಅಂಗವಿಕಲರಿಗೆ (ಸೆರೆಬ್ರಲ್ ಪಾಲಿಸಿ, ಮಸ್ಕುಲರ್ ಡಿಸ್ಟ್ರೋಫಿ, ಹಿಮೋಫಿಲಿಯಾ, ಅಲ್ಪ ದೃಷ್ಟಿದೋಷ) ಜೆರಾಕ್ಸ್ ಯಂತ್ರ ಸೌಲಭ್ಯ, ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ (ದೃಷ್ಟಿದೋಷ ಉಳ್ಳವರನ್ನು ಹೊರತುಪಡಿಸಿ) ಲ್ಯಾಪ್‌ಟಾಪ್ ಒದಗಿಸಲಾಗುತ್ತಿದೆ. ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ತಲಾ 16 ಮತ್ತು ಸಾಮಾನ್ಯ ವರ್ಗದ 42 ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಪ್ರತಿ ವರ್ಷ ತ್ರಿಚಕ್ರ ವಾಹನಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿ ಎಲ್ಲ ಬಗೆಯ ಅಂಗವಿಕಲತೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಹಾಯವಾಗುತ್ತದೆ. ಜತೆಗೆ ಫಲಾನುಭವಿಗಳಿಗೆ ಆದಾಯವೂ ಬರುತ್ತದೆ.ಡಾ.ಕೆ.ಕೆ.ಪ್ರಕಾಶ್ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net