

ಬೆಳಗಾವಿ: ಅಂಗವೈಕಲ್ಯ ಮೆಟ್ಟಿ ನಿಂತಾಗ ಯಶಸ್ಸು ಗಳಿಸಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿವಿ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು.
ರಾಣಿ ಚನ್ನಮ್ಮ ವಿವಿಯ ಕುವೆಂಪು ಸಭಾಭವನದಲ್ಲಿ ಗುರುವಾರ ಆರ್‌ಸಿಯು ದಿವ್ಯಾಂಗರ ಕೋಶ, ಕಾಲೇಜು ಅಭಿವೃದ್ಧಿ ಪರಿಷತ್ ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಫ್ಯಾಕಲ್ಟಿ ಕೆಪ್ಯಾಸಿಟಿ ಬಿಲ್ಡಿಂಗ್ ವರ್ಕಶಾಪ್ ಆನ್ ಡಿಸೆಬಲ್ ಆ್ಯಂಡ್ ಇನಕ್ಲೂಸಿವ್ ಎಜುಕೇಷನ್’ ವಿಷಯದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಹದ ಕೆಲ ನೂನ್ಯತೆ ಮತ್ತು ವೈಕಲ್ಯವನ್ನು ಚಿಕಿತ್ಸೆ ಮತ್ತು ಉಪಚಾರದ ಮೂಲಕ ಹೋಗಲಾಡಿಸಲು ಸಾಧ್ಯವಿದೆ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಡಾ. ಮಹಾಂತೇಶ ಕಿವಡಸಣ್ಣವರ ಮಾತನಾಡಿ, ಒಂದು ಕಾಲದಲ್ಲಿ ಅಂಗವಿಕಲರಿಗೆ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಶಾಲೆ-ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ, ಪ್ರಸ್ತುತ ಅನೇಕ ಎನ್‌ಜಿಒಗಳ ಹೋರಾಟದ ಫಲವಾಗಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಮಾತ್ರವಲ್ಲದೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕೂಡ ದೊರೆಯುತ್ತಿವೆ ಎಂದರು. ಸಮರ್ಥಂ ಸಂಸ್ಥೆಯಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ.
ಪಿಯುಸಿಯಿಂದ ಹಿಡಿದು ಪಿಎಚ್.ಡಿ ವ್ಯಾಸಂಗ ಮಾಡುವ ಅನೇಕ ಅಂಗವಿಕಲರಿಗೆ ವಸತಿ ಸಹಿತ ಸೌಲಭ್ಯ ಕಲ್ಪಿಸಿ ಶಿಷ್ಯವೇತನದೊಂದಿಗೆ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಟ್ರಸ್ಟ್ ಹೊಂದಿದೆ ಎಂದರು. ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ ಮಾತನಾಡಿ, ಅಂಗವಿಕಲರು ಮಾಡಿದ ಸಾಧನೆ ಗಮನಿಸಿದಾಗ ಕೆಲ ಬಾರಿ ಅವರನ್ನು ಅಸಮರ್ಥರು ಅಥವಾ ಅಂಗವಿಕಲರು ಎಂದು ಹೇಳುವುದು ಕಷ್ಟವಾಗುತ್ತದೆ. ಕೆಲ ಬಾರಿ ಎಲ್ಲ ಸಾಮರ್ಥ್ಯ ಹೊಂದಿದ್ದರು, ಕೀಳರಮೆ ಕಾರಣದಿಂದ ಸದಾ ನೂನತೆ ಜಪ ಮಾಡುವವರನ್ನು ಸಮಾಜದಲ್ಲಿ ಕಾಣುತ್ತೇವೆ. ಆದ್ದರಿಂದ ನಮ್ಮಲ್ಲಿರುವ ಕೊರತೆ ಬದಿಗೊತ್ತಿ ಇಚ್ಚಾಶಕ್ತಿಯೊಂದಿಗೆ ಸಾಧನೆಗೆ ಮುಂದಾಗಬೇಕು ಎಂದರು. ಗ್ಯಾನಪ್ಪ ಮಾದರ ಪ್ರಾರ್ಥಿಸಿದರು. ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮರ್ಥ ಅಂಗವಿಕಲ ಸಂಸ್ಥೆಯ ಶಾಖಾಧಿಕಾರಿ ಅರುಣಕುಮಾರ ಎಂ.ಜಿ. ಪರಿಚಯಿಸಿದರು. ಹಸನಭಾಷಾ ತೆಗ್ಗಿನಮನಿ ನಿರೂಪಿಸಿದರು. ದಿವ್ಯಾಂಗ ಕೋಶದ ನಿರ್ದೇಶಕಿ ಡಾ. ಸುಷ್ಮಾ ಆರ್. ವಂದಿಸಿದರು.