ಅಂಗವಿಕಲ ಸ್ನೇಹಿ ಚುನಾವಣೆ : ಪ್ರಥಮ ಬಾರಿಗೆ ಸಕ್ಷಮ್ ಆ್ಯಪ್ ಅಭಿವೃದ್ಧಿ

election
Published on

ಸದೇಶ್ ಕಾರ್ಮಾಡ್ ಮೈಸೂರು
ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಆಯೋಗ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದು, ಇದೇ ಪ್ರಥಮ ಬಾರಿಗೆ ಅಂಗವಿಕಲರ ಮತದಾನ ಪ್ರಮಾಣ ಹೆಚ್ಚಿಸಲು ಅಂಗವಿಕಲರ ಸ್ನೇಹಿಯಾದ ಆ್ಯಪ್‌ವೊಂದನ್ನು ಕೇಂದ್ರ ಚುನಾವಣಾ ಆಯೋಗ ಅಭಿವೃದ್ಧಿ ಪಡಿಸಿದೆ.

ಅಂಗವಿಕಲ ಮತದಾರರು ಸುಗಮ ರೀತಿಯಲ್ಲಿ ಮತದಾನ ಮಾಡಲು ಕೇಂದ್ರ ಚುನಾವಣಾ ಆಯೋಗ ಪ್ರಥಮ ಬಾರಿಗೆ ಸಕ್ಷಮ್ ಆ್ಯಪ್ (ಖಞಉಇಐ) ಅನ್ನು ಪರಿಚಯಿಸಿದ್ದು, ಈ ಆ್ಯಪ್ ಮೂಲಕ ಅಂಗವಿಕಲರು ಬೆರಳ ತುದಿಯಲ್ಲಿಯೇ ಚುನಾವಣೆಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಕಳೆದ ಬಾರಿಯಂತೆ ಈ ಬಾರಿಯೂ ಚುನಾವಣಾ ಆಯೋಗ ಶೇ.40 ರಷ್ಟು ಅಂಗವಿಕಲತೆ ಹೊಂದಿರುವವರಿಗೆ ಮನೆಯಲ್ಲಿಯೇ ಅಂಚೆ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿದೆ. ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ಅಂಗವಿಕಲರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಮತಗಟ್ಟೆಗೆ ಬಂದು ಮತ ಚಲಾಯಿಸಲು ಬಯಸುವ ಅಂಗವಿಕಲರಿಗೆ ಸಕ್ಷಮ್ ಆ್ಯಪ್ ಮತದಾನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿಯನ್ನು ಒದಗಿಸಲಿದೆ. ಜಿಲ್ಲೆಯಲ್ಲಿ ಒಟ್ಟು 33,878 ಅಂಗವಿಕಲ ಮತದಾರರು ಇದ್ದು, ಸಕ್ಷಮ್ ಆ್ಯಪ್ ಸಾಕಷ್ಟು ಜನರಿಗೆ ಉಪಯುಕ್ತವಾಗಲಿದೆ.

ಏನಿದು ಸಕ್ಷಮ್ ಆ್ಯಪ್?:

ಮತದಾರರ ಪಟ್ಟಿಯಲ್ಲಿರುವ ಅಂಗವಿಕಲರು ಸಕ್ಷಮ್ ಆ್ಯಪ್ ಮೂಲಕ ಚುನಾವಣೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು ಪಡೆಯಬಹುದು. ಅಂಗವಿಕಲರು ಗೂಗಲ್ ಪ್ಲೇ ಸ್ಟೋರ್ ಮೂಲಕ ಸಕ್ಷಮ್ ಆ್ಯಪ್‌ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಕ್ಷಮ್ ಆ್ಯಪ್‌ನಲ್ಲಿ ಮತದಾರರಾಗಿ ಹೊಸದಾಗಿ ನೋಂದಣಿ ಮಾಡಲು ಸಹ ಅವಕಾಶವಿದೆ. ಈ ಆ್ಯಪ್ ಬಳಸಿಕೊಂಡು ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಸುಲಭವಾಗಿ ಪಡೆಯುವುದು. ಇಷ್ಟು ಮಾತ್ರವಲ್ಲದೆ, ಮತಗಟ್ಟೆಗೆ ತೆರಳಲು ತ್ರಿಚಕ್ರವಾಹನವನ್ನು ಮುಂಗಡವಾಗಿ ಕಾಯ್ದಿರಿಸುವುದು, ದೂರನ್ನು ದಾಖಲಿಸುವುದು ಮತ್ತು ಕೇಂದ್ರ ಚುನಾವಣಾ ಆಯೋಗವು ಹೊರತಂದಿರುವ ಎಲ್ಲ ಚುನಾವಣಾ ಲೇಖನಗಳು ಹಾಗೂ ಸಂದೇಶಗಳನ್ನು ಓದಬಹುದು.

ಮತಗಟ್ಟೆಯಲ್ಲಿ ಅಂಗವಿಕಲ ಸ್ನೇಹಿ ಉಪ ಕ್ರಮಗಳಾದ ನೆಲ ಅಂತಸ್ತಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿರುವುದು, ರ‌್ಯಾಂಪ್ ವ್ಯವಸ್ಥೆ ಕಲ್ಪಿಸಿರುವುದು, ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿರುವುದು, ದೃಷ್ಟಿದೋಷವುಳ್ಳವರಿಗೆ ಬ್ರೈಲ್‌ಲಿಪಿಯಲ್ಲಿ ಮಾದರಿ ಮತಪತ್ರ ಮುದ್ರಿಸಿ ಪ್ರದರ್ಶಿಸಿರುವುದು, ಮತಗಟ್ಟೆಯಲ್ಲಿ ಸಹಾಯ ಮಾಡಲು ಸ್ವಯಂ ಸೇವಕರ ನೇಮಕ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ, ತ್ರಿಚಕ್ರವಾಹನ ವ್ಯವಸ್ಥೆ, ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಕಲ್ಪಿಸಿರುವುದನ್ನು ಆ್ಯಪ್ ಮೂಲಕ ಖಚಿತ ಪಡಿಸಿಕೊಳ್ಳ ಬಹುದು. ಈ ಎಲ್ಲ ಮಾಹಿತಿಗಳನ್ನು ಆ್ಯಪ್ ಮೂಲಕ ಪಡೆದು ಮತಗಟ್ಟೆಯಲ್ಲಿ ಆರಾಮದಾಯಕವಾಗಿ ಬಂದು ಮತದಾನ ಮಾಡಬಹುದು.

ಈ ಆ್ಯಪ್ ಮೂಲಕ ಅಂಗವಿಕಲರು ತಮ್ಮ ಭಾವಚಿತ್ರವುಳ್ಳ ಮತದಾರರ ಚೀಟಿಯ ಸಂಖ್ಯೆಯನ್ನು ಬಳಕೆ ಮಾಡಿ ತಮ್ಮ ಮತಗಟ್ಟೆ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಇದ್ದಲ್ಲಿ ದಾಖಲಿಸಬಹುದು. ಕೇಂದ್ರ ಚುನಾವಣಾ ಆಯೋಗ ಹೊರತಂದಿರುವ ಎಲ್ಲ ಮಾರ್ಗಸೂಚಿಗಳು, ಸಂದೇಶಗಳು ಇವಿಎಂ ಹಾಗೂ ವಿವಿ ಪ್ಯಾಟ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಕ್ಷೇತ್ರವಾರು ಅಂಗವಿಕಲ ಮತದಾರರ ವಿವರ:

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 3,500 ಅಂಗವಿಕಲ ಮತದಾರರು, ಕೃಷ್ಣರಾಜನಗರದಲ್ಲಿ 3,240, ಹುಣಸೂರಿನಲ್ಲಿ 3,676, ಎಚ್.ಡಿ. ಕೋಟೆಯಲ್ಲಿ 3,555, ನಂಜನಗೂಡಿನಲ್ಲಿ 3,197, ಚಾಮುಂಡೇಶ್ವರಿಯಲ್ಲಿ 2865, ಕೃಷ್ಣರಾಜದಲ್ಲಿ 1,557, ಚಾಮರಾಜದಲ್ಲಿ 2,565, ನರಸಿಂಹರಾಜದಲ್ಲಿ 2,935, ವರುಣದಲ್ಲಿ 3,480, ತಿ.ನರಸೀಪುರದಲ್ಲಿ 3,308 ಅಂಗವಿಕಲ ಮತದಾರರು ಇದ್ದಾರೆ.

ಅಂಚೆ ಮತದಾನ ಮಾಡುವುದು ಹೇಗೆ?

ಮತಗಟ್ಟೆಗೆ ಆಗಮಿಸಿ ಮತಚಲಾಯಿಸಲು ಸಾಮರ್ಥ್ಯವಿಲ್ಲದ ಅಂಗವಿಕಲರು ಮನೆಯಲ್ಲಿಯೇ ಅಂಚೆ ಮತದಾನ ಮಾಡಬಹುದು. ಶೇ.40 ರಷ್ಟು ಅಂಗವಿಕಲತೆ ಹೊಂದಿರುವ ಅಂಗವಿಕಲರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅರ್ಹರು ನಮೂನೆ 12 ಡಿ ಯನ್ನು ಭರ್ತಿ ಮಾಡಿ ನೀಡಬೇಕು. ಅರ್ಜಿ ಹಂಚಿಕೆಯಾದ ನಂತರ ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕರಿಸಲಾಗು ವುದು. ಇದರ ಆಧಾರದಲ್ಲಿ ಎಷ್ಟು ಜನರು ಮನೆಯಲ್ಲಿ ಅಂಚೆ ಮತದಾನ ಮಾಡಲು ಆಸಕ್ತಿ ತೋರುತ್ತಿದ್ದಾರೆ ಎಂಬ ಅಂದಾಜು ಸಿಗುತ್ತದೆ. ಈ ಆಧಾರದ ಮೇಲೆ ಎರಡರಿಂದ ಮೂರು ಬೂತ್‌ಗೆ ಒಬ್ಬರು ಸೆಕ್ಟರ್ ಆಫೀಸರ್‌ರನ್ನು ನೇಮಿಸಿ ಅವರ ಮೂಲಕ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ನಾಲ್ಕು ಜನರ ಒಂದು ತಂಡ ಒಂದು ರೂಟ್ ಮ್ಯಾಪ್ ರಚಿಸಿಕೊಂಡು ಪೋಸ್ಟಲ್ ಬ್ಯಾಲೆಟ್ ಪೇಪರ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ಮತ ಹಾಕಿಸುತ್ತಾರೆ.

ಅಂಗವಿಕಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ ಪ್ರಥಮ ಬಾರಿಗೆ ಸಕ್ಷಮ್ ಆ್ಯಪ್‌ಅನ್ನು ಪರಿಚಯಿಸಿದೆ. ಈ ಆ್ಯಪ್ ಮೂಲಕ ಅಂಗವಿಕಲರು ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಮತದಾನ ಕುರಿತು ಇರುವ ಎಲ್ಲ ಗೊಂದಲಗಳನ್ನು ಈ ಆ್ಯಪ್ ಪರಿಹರಿಸುತ್ತದೆ. ಅಂಗವಿಕಲ ಮತದಾರರು ಆ್ಯಪ್ ಬಳಸಿಕೊಂಡು ಸಂತೋಷದಿಂದ ನಿರ್ಭೀತರಾಗಿ, ಆರಾಮದಾಯಕವಾಗಿ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು.
ಕೆ.ಎಂ. ಗಾಯತ್ರಿ,
ಅಧ್ಯಕ್ಷೆ, ಜಿಲ್ಲಾ ಸ್ವೀಪ್ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net