ಗಲೀಜು ನೀರು ನಿಂತು ಗಬ್ಬು ವಾಸನೆ

15MDG1 AYYO PROBLEM
Published on

ಮುಂಡರಗಿ: ಪಟ್ಟಣದ ಕೊಪ್ಪಳ ಮುಖ್ಯರಸ್ತೆಗೆ ಹೊಂದಿಕೊಂಡಿರುವ (ಹೇಮರಡ್ಡಿ ಮಲ್ಲಮ್ಮ ನಗರ) ಚರಂಡಿಯಲ್ಲಿ ಗಲೀಜು ನೀರು ಸಂಗ್ರಹವಾಗಿ ದುರ್ವಾಸನೆ ಹರಡುತ್ತಿದ್ದು, ಅವ್ಯವಸ್ಥೆ ತಾಣವಾಗಿ ಮಾರ್ಪಟ್ಟಿದೆ.

ಬಂಡಾಯ ಭೀಮರಾಯ ವೃತ್ತದಿಂದ (ಕೊಪ್ಪಳ ಸರ್ಕಲ್) ಕೊಪ್ಪಳ ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಪರಿವರ್ತಕ ಕಂಬದ ಬಳಿಯಲ್ಲಿನ ಚರಂಡಿ ನೀರು ಮುಂದೆ ಹರಿಯದಂತ ಸ್ಥಿತಿ ಇದೆ. ರಸ್ತೆಗಿಂತ ಕೆಳಭಾಗದಲ್ಲಿ ಚರಂಡಿ ಇದ್ದು, ಚರಂಡಿ ನೀರು ಸರಾಗವಾಗಿ ಮುಂದೆ ಹರಿಯದೇ ಒಂದೆಡೆ ಸಂಗ್ರಹವಾಗಿ ನಿಲ್ಲುತ್ತಿದೆ. ಎರಡ್ಮೂರು ತಿಂಗಳಿಂದ ಇದೇ ರೀತಿ ಸಮಸ್ಯೆ ಇದ್ದರೂ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಸ್ಥಳೀಯರ ಬೇಸರ.

ಜೋರಾಗಿ ಮಳೆ ಬಂದಂಥ ಸಂದರ್ಭದಲ್ಲಿ ಚರಂಡಿಯ ಗಲೀಜು ನೀರು ಮನೆಗಳ ಮುಂದೆ ಬಂದು ನಿಲ್ಲುತ್ತದೆ. ಜನರು ಗಲೀಜು ನೀರಿನ ಮೇಲೆಯೇ ನಡೆದಾಡಬೇಕಾಗಿದೆ. ಸದ್ಯ ಕೆಲ ಮನೆಯ ಮುಂದೆ ನೀರು ನಿಂತುಕೊಂಡಿದ್ದು, ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಕೊಪ್ಪಳ ಮುಖ್ಯರಸ್ತೆ ಎಡಭಾಗದಲ್ಲಿರುವ ಚರಂಡಿ ನೀರು ಮಳೆ ಬಂದಾಗ ತುಂಬಿ ಬಲಭಾಗದಲ್ಲಿನ ಚರಂಡಿಗೆ ಬಂದು ಸೇರುತ್ತದೆ. ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಟಿಸಿ ಕಂಬದ ಪಕ್ಕದಲ್ಲೇ ಒಳ ಅಡ್ಡರಸ್ತೆಗೆ ಸಿಮೆಂಟ್ ಸಿ.ಡಿ. ಹಾಕಿದ್ದು ಅವೈಜ್ಞಾನಿಕವಾಗಿದೆ. ಈಗಿರುವ ಚರಂಡಿ ಸಹ ಕಿರಿದಾಗಿದೆ. ಹೀಗಾಗಿ ಚರಂಡಿಯನ್ನು ಎತ್ತರಪಡಿಸಬೇಕು. ಈಗಿನ ಸಿ.ಡಿ.ಯನ್ನು ತೆಗೆದು ಎತ್ತರವಾಗಿ ನಿರ್ವಿುಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಹಲವು ತಿಂಗಳಿಂದ ಗಲೀಜಿನಿಂದ ಕೂಡಿರುವ ಚರಂಡಿ ನೀರಿನ ಮಧ್ಯೆ ನಡೆದಾಡುವಂಥ ದುಸ್ಥಿತಿ ನಿರ್ವಣವಾಗಿದೆ. ಈ ಬಗ್ಗೆ ಜನರೆಲ್ಲ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ, ಸಮಸ್ಯೆ ಬಗೆಹರಿಸುವ ಕೆಲಸವಾಗಿಲ್ಲ. ಚರಂಡಿ ನೀರು ನಿಲ್ಲದಂತೆ ಮುಂದೆ ಸರಿಯಾಗಿ ಹರಿದು ಹೋಗಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸ್ಥಳೀಯರಾದ ಮರ್ದಾನಸಾಬ್ ಸಂದಿಮನಿ, ಕಟ್ಟೆಪ್ಪ ತಾಮ್ರಗುಂಡಿ, ಸುಭಾಸ ಹರ್ಲಾಪೂರ, ಅಂದಪ್ಪ ನವಲಗುಂದ, ಕೊಟ್ರೇಶ ಶೀರಿ, ಶಿವಾನಂದ ವಸ್ತ್ರದ, ಮಹೇಶ ಬಳಿಗಾರ, ಮಂಜುನಾಥ ಬಂಡಿ, ಶಾಬೀರಬಾನು, ರತ್ನಮ್ಮ ನವಲಗುಂದ ಮೊದಲಾದವರು ಒತ್ತಾಯಿಸಿದ್ದಾರೆ.

ಮುಂಡರಗಿ-ಕೊಪ್ಪಳ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಚರಂಡಿಯಾಗಿರುವುದರಿಂದ ಅದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ. ಇನ್ನೊಂದು ವಾರದಲ್ಲಿ ಚರಂಡಿ ನೀರು ನಿಲ್ಲುವ ಭಾಗದಲ್ಲಿನ ಅಡ್ಡ ರಸ್ತೆಯಲ್ಲಿರುವ ಸಿ.ಡಿ. ತೆಗೆದು ಹೊಸದಾಗಿ ಎತ್ತರವಾಗಿ ನಿರ್ವಿುಸಲಾಗುವುದು. ಒಂದೆಡೆ ನಿಂತಿರುವ ಚರಂಡಿ ನೀರನ್ನು ಸರಿಯಾಗಿ ಹರಿಯುವಂತೆ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. | ಶಂಕರ ಹುಲ್ಲಮ್ಮನವರ, ಪುರಸಭೆ ಮುಖ್ಯಾಧಿಕಾರಿ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net