ಕೊಳಚೆ ನೀರಿನಿಂದ ಗಬ್ಬೆದ್ದು ನಾರುತ್ತಿದೆ ಹಾನಗಲ್ಲ ಪುರಸಭೆ

purasabhe
Published on

ಹಾನಗಲ್ಲ: ಪಟ್ಟಣದ ನಾಗರಿಕರಿಗೆ ಸ್ವಚ್ಛತೆಯ ಪಾಠ ಮಾಡುವ ಪುರಸಭೆಯೇ ಗಬ್ಬೆದ್ದು ನಾರುತ್ತಿದ್ದು, ವಿವಿಧ ಕೆಲಸಕ್ಕಾಗಿ ಕಚೇರಿಗೆ ಬರುವ ಜನ ಮೂಗುಮುಚ್ಚಿಕೊಂಡು ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಬಡಾವಣೆಗಳ ಕೊಳಚೆ ನೀರು ಹರಿದು ಪುರಸಭೆ ಕಾರ್ಯಾಲಯಕ್ಕೆ ನುಗ್ಗುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡೂ ಕಾಣದಂತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತಡಸ-ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿನ ಗಟಾರದ ನೀರು ರಸ್ತೆ ತುಂಬ ಹರಿಯುತ್ತಿದೆ. ಶಿವಾಜಿನಗರ, ಇಸ್ಲಾಂಪುರ ಓಣಿ, ಕಿತ್ತೂರಚನ್ನಮ್ಮ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ಬೀದಿಗಳ ಗಟಾರದ ನೀರು ಇದೇ ರಸ್ತೆಯ ಗಟಾರಕ್ಕೆ ಬಂದು ಸೇರುತ್ತದೆ. ಈ ಹೆದ್ದಾರಿಯ ಪಕ್ಕದಲ್ಲಿರುವ ಗಟಾರದಲ್ಲಿ ಹೂಳು ತುಂಬಿಕೊಂಡಿರುವುದರಿಂದ ಮಳೆ ಶುರುವಾದರೆ ಸಾಕು, ನೀರು ರಸ್ತೆಯುದ್ದಕ್ಕೂ ಹರಿದು ಪುರಸಭೆ ಕಚೇರಿಯೊಳಕ್ಕೆ ನುಗ್ಗುತ್ತದೆ. ಆದರೂ ಸಂಬಂಧಪಟ್ಟವರು ಇದನ್ನು ಗಮನಿಸದಿರುವುದು ವಿಪರ್ಯಾಸವೇ ಸರಿ.

ಗಟಾರದ ನೀರನ್ನು ದಾಟಿಕೊಂಡು ಗ್ರಾಮದೇವಿ ಪಾದಗಟ್ಟಿಗೆ ಭಕ್ತರು ತೆರಳಬೇಕಾಗಿದೆ. ಹಾವೇರಿ, ಶಿರಸಿ, ಶಿವಮೊಗ್ಗ, ಹುಬ್ಬಳ್ಳಿ ಮಾರ್ಗಗಳ ನೂರಾರು ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಅವೆಲ್ಲವೂ ಈ ಗಟಾರದ ನೀರಲ್ಲಿ ಹಾದು ಮುಂದೆ ಸಾಗುತ್ತವೆ. ಎಲ್ಲ ಬಸ್‌ಗಳೂ ಇಲ್ಲಿಯೇ ನಿಲುಗಡೆಯಾಗುವುದರಿಂದ ಈ ಗಲೀಜು ನೀರಿನಲ್ಲಿಯೇ ಪ್ರಯಾಣಿಕರು ಬಸ್ ಇಳಿಯುವುದು-ಹತ್ತುವುದು ಮಾಡಬೇಕಿದೆ. ಈ ರಸ್ತೆಯಲ್ಲಿ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು ಜನರು-ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

ಹೆದ್ದಾರಿ ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದರಿಂದ ಪುರಸಭೆಯು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಪುರಸಭೆಯೊಳಗೇ ಮಲಿನ ನೀರು ಹರಿಯುತ್ತಿದ್ದರೂ ಪಿಡಬ್ಲುೃಡಿ ಇಲಾಖೆಯವರು ಸರಿಪಡಿಸಲಿ ಎಂದು ಪುರಸಭೆಯವರು ಸುಮ್ಮನೆ ಕುಳಿತಿದ್ದಾರೆ. ಇವರಿಬ್ಬರ ಮಧ್ಯೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಸೌಂದರ್ಯಕ್ಕೂ ಈ ದೃಶ್ಯ ಕಳಂಕ ತರುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ.

ತಡಸ-ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿನ ಗಟಾರ ಹೂಳು ತುಂಬಿದ್ದರಿಂದ ಹಾನಗಲ್ಲ ಪಟ್ಟಣದ ಎಲ್ಲ ಚರಂಡಿಗಳ ನೀರು ಮುಂದೆ ಸಾಗದಂತಾಗುತ್ತಿದೆ. ಅದೆಲ್ಲವೂ ಮುಖ್ಯ ಗಟಾರದಿಂದ ಹೊರಬಂದು ರಸ್ತೆಯ ತುಂಬ ನಿಂತುಕೊಳ್ಳುತ್ತಿದೆ. ಪುರಸಭೆಯೊಳಗೂ ನುಗ್ಗಿ ಸಮಸ್ಯೆ ಸೃಷ್ಟಿಸುತ್ತಿದೆ. ರಸ್ತೆ ಪಕ್ಕದ ಅಂಗಡಿಯವರಿಗೂ ಈ ಗಟಾರದ ನೀರಿನ ದುರ್ಗಂಧದಿಂದ ವ್ಯಾಪಾರ ವಹಿವಾಟಿಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಗಟಾರದಲ್ಲಿನ ಹೂಳು ತೆಗೆಸಬೇಕು. ಮಲಿನ ನೀರನ್ನು ಸುರಳೇಶ್ವರ ರಸ್ತೆಯತ್ತ ಸರಾಗವಾಗಿ ಸಾಗುವಂತೆ ವ್ಯವಸ್ಥೆ ಮಾಡಬೇಕು.ಸೋಮಣ್ಣ ಮೆಹರವಾಡೆ, ಹಾನಗಲ್ಲ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net