ತುಮಕೂರಿನವರಿಗೂ ಕೊಳಚೆ ನೀರು!

1
Published on

ಈಚನೂರು ಕೆರೆ ಸೇರುತ್ತಿದೆ ಯುಜಿಡಿ ತ್ಯಾಜ್ಯ | ತಿಪಟೂರು ನಗರಸಭೆ ರ್ನಿಲಕ್ಷ್ಯಕ್ಕೆ ನಾಗರಿಕರ ಆಕ್ರೋಶ

ಮೂರ್ತಿ ಟಿ.ಸಿ.ಎಸ್​. ತಿಪಟೂರು

ಇಷ್ಟು ದಿನ ತಿಪಟೂರಿನ ಜನರು ಯುಜಿಡಿ ತ್ಯಾಜ್ಯ ಸೇವಿಸುತ್ತಿದ್ದರು, ಇನ್ಮುಂದೆ ಈ ದೌರ್ಭಾಗ್ಯ ತುಮಕೂರು ನಗರದವರದ್ದು.

ಹೌದು.. ನಗರ ಸಮೀಪದ ಈಚನೂರು ಕೆರೆ ಮಧ್ಯೆ ಶುದ್ಧ ಹಾಗೂ ಕೊಳಚೆ ನೀರು ಬೇರ್ಪಡಿಸಲು ಹಾಕಲಾಗಿದ್ದ ಬದು ಇತ್ತೀಚೆಗೆ ಸುರಿದ ಕಿತ್ತುಹೋಗಿದ್ದು, ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಬೆರೆತು, ಹಿಮ್ಮುಖವಾಗಿ ಹರಿಯುತ್ತಿದ್ದು, ತುಮಕೂರಿಗೆ ಕುಡಿಯುವ ನೀರು ಪೂರೈಸುವ ಹೇಮಾವತಿ ನಾಲೆಗೆ ಸೇರುತ್ತಿದೆ.

ಸದ್ಯ ಇದೇ ನಾಲೆ ನೀರು ತುಮಕೂರು ನಗರ ವಾಸಿಗಳಿಗೆ ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ಬಳಸುವ ಕೆರೆಗಳಿಗೆ ಯಾವುದೇ ಕಾರಣಕ್ಕೂ ತ್ಯಾಜ್ಯ ಹಾಗೂ ಮಲಿನ ನೀರು ಸೇರಬಾರದೆಂಬ ನಿಯಮವಿದ್ದರೂ, ಎಸ್​ಟಿಪಿ ಘಟಕಕ್ಕೆ ಸಾಗಬೇಕಾದ ತ್ಯಾಜ್ಯ ನೀರು ನಗರಸಭೆ ಆಡಳಿತ ವೈಫಲ್ಯದಿಂದ ಗಾಂಧಿ ನಗರದಿಂದ ಹರಿದು, ಗೊರಗೊಂಡನಹಳ್ಳಿ, ಈಡೇನಹಳ್ಳಿ, ಬಂಡಿಹಳ್ಳಿ, ಹಿಂಡಿಸ್ಕೆರೆ, ಕೊಪ್ಪ ಮೂಲಕ ಸಾಗಿದ ನಂತರ ಹೇಮಾವತಿ ನೀರು ಹರಿಯುವ ಟಿ.ಸುಬ್ರಮಣ್ಯಂ ಎಡದಂಡೆ ನಾಲೆ ನಂ.3ಕ್ಕೆ ಸೇರುತ್ತಿತ್ತು. ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದು ಯಾವುದೇ ಕಾರಣಕ್ಕೂ ಕುಡಿಯುವ ನೀರು ನಾಲೆಗೆ ಸೇರದಂತೆ ಕ್ರಮ ವಹಿಸಿ ಎಂದು ನಗರಸಭೆಗೆ ಆದೇಶಿಸಿದ ಪರಿಣಾಮ, ನಾಲೆ ಸೇರುತ್ತಿದ್ದ ನೀರು ಕುಡಿಯುವ ನೀರಿನ ಸಂಗ್ರಹಾಗಾರ ಈಚನೂರು ಕೆರೆಗೆ ಸೇರುವಂತಾಗಿತ್ತು.

ಆದರೆ, ತ್ಯಾಜ್ಯ ನೀರು ಕುಡಿಯುವ ನೀರಿನ ಕೆರೆಗೆ ಹರಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ನಗರಸಭೆಯು, ತ್ಯಾಜ್ಯ ನೀರು ಈಚನೂರು ಕೆರೆ ಸೇರದಂತೆ ಕೆರೆ ಮಧ್ಯೆ ಬದು ನಿರ್ಮಿಸಿ, ಅದರ ಮೇಲೆ ಪ್ಲಾಸ್ಟಿಕ್​ ಹೊದಿಕೆ ಹಾಕಿತ್ತು. ಆದರೆ, ಕಳೆದ ತಿಂಗಳಿಡೀ ಸುರಿದ ಭಾರಿ ಮಳೆಗೆ ಸಾಕಷ್ಟು ಪ್ರಮಾಣದ ಮಳೆ ನೀರು ಈಚನೂರು ಕೆರೆ ಸೇರಿದ ಪರಿಣಾಮ ನಗರಸಭೆ ನಿರ್ಮಿಸಿದ್ದ ಬದು ಒಡೆದು, ತ್ಯಾಜ್ಯ

ನೀರು, ಕುಡಿಯುವ ನೀರಿನಲ್ಲಿ ಬೆರೆಕೆಯಾಗುತ್ತಿದೆ.

ಈಚನೂರು ಕೆರೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ನೀರನ್ನು ಪಂಪ್​ ಮೂಲಕ ಪ್ರತ್ಯೇಕ ಸ್ಥಳಕ್ಕೆ ಸಾಗಿಸುವ ಪ್ರಯತ್ನವೂ ವಿಫಲವಾಗಿದೆ. ಇದರಿಂದಾಗಿ ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚಿ, ಕೊಳಚೆ ನೀರು ಹಿಮ್ಮುಖವಾಗಿ ಹರಿದು. ಹೇಮಾವತಿ ನಾಲೆ ಸೇರುತ್ತಿದೆ. ನಾಲೆಯಿಂದ ಈಚನೂರು ಕೆರೆಯ ಅಂಚಿನಲ್ಲಿರುವ ಜಾಕ್​ವೆಲ್​ವರೆಗೂ ಪ್ರತ್ಯೇಕ ಪೈಪ್​ಲೈನ್​ ಮೂಲಕ ನಾಲೆ ನೀರನ್ನು ಹರಿಸಿ, ಇದನ್ನು ನಗರಕ್ಕೆ ಪಂಪ್​ ಮಾಡಲಾಗುತ್ತಿದೆ ಎಂಬ ನಗರಸಭೆಯ ಲೆಕ್ಕಾಚಾರ ಮತ್ತೆ ಉಲ್ಟಾ ಆಗಿದ್ದು, ನಾಲೆಯಲ್ಲಿ ಹರಿಯುತ್ತಿರುವ ನೀರೇ ತ್ಯಾಜ್ಯಯುಕ್ತವಾಗಿರುವುದರಿಂದ, ಇನ್ನೆಲ್ಲಿಯ ಶುದ್ಧ ನೀರನ್ನು ಪಂಪ್​ ಮಾಡಲು ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ನನೆಗುದಿಗೆ ಬಿದ್ದ ಪೈಪ್​ಲೈನ್​ ಅಳವಡಿಕೆ ಕಾಮಗಾರಿ: 3 ಹಂತಗಳಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ ಅಂದಾಜು 130 ಕಿ.ಮೀ ಪೈಪ್​ಲೈನ್​ ಮೂಲಕ ನಿರ್ಮಿಸಲು ಉದ್ದೇಶಿಸಲಾಗಿದ್ದ ಯುಜಿಡಿ ಕಾಮಗಾರಿ 3 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಗಾಂಧಿನಗರ ಭಾಗದ 4 ಸಾವಿರ ಮನೆಗಳಿಗೆ ಇಲ್ಲಿವರೆಗೂ ಯುಜಿಡಿ ಸಂಪರ್ಕ ಕಲ್ಪಿಸಲಾಗಿಲ್ಲ. 3.5 ಎಂ.ಎಲ್​.ಡಿ. ಸಾಮರ್ಥ್ಯದ ಎಸ್​.ಟಿ.ಪಿ. ಘಟಕಕ್ಕೆ ತ್ಯಾಜ್ಯ ನೀರು ಪಂಪ್​ ಮಾಡುವ ಈಡೇನಹಳ್ಳಿ ಬಳಿಯ ಮೋಟಾರ್​ ಕೆಟ್ಟು ವರ್ಷವಾದರೂ ಬದಲಿ ಮೋಟಾರು ಅಳವಡಿಸದ ಕಾರಣ ತ್ಯಾಜ್ಯ ನೀರು ಈಚನೂರು ಕೆರೆ ಮತ್ತು ಹೇಮಾವತಿ ನಾಲೆ ಸೇರುತ್ತಿದೆ.

ಗಾಂಧಿನಗರ ಭಾಗದಿಂದ ಹರಿಯುತ್ತಿರುವ ತ್ಯಾಜ್ಯ ನೀರು ಗೊರಗೊಂಡನಹಳ್ಳಿ, ಕೊಪ್ಪ. ಹಿಂಡಿಸ್ಕೆರೆ, ಭಾಗದ ತೋಟಗಳಲ್ಲಿ ಶೇಖರವಾಗಿದ್ದು, ಕಲುಷಿತ ನೀರಿನ ಪ್ರಭಾವದಿಂದ ದಿನದಿಂದ, ದಿನಕ್ಕೆ ತೆಂಗು, ಮತ್ತು ಅಡಕೆ ಬೆಳೆ ನಾಶವಾಗುವ ಜತೆಗೆ, ತೋಟದವರು ದನ, ಕರುಗಳನ್ನು ಮೇಯಿಸಲು ಸಾಧ್ಯವಾಗುತ್ತಿಲ್ಲ. ಇಡೀ ತೋಟ ಗಬ್ಬು ನಾರುತ್ತಿದೆ. ಅಲ್ಲದೇ ಇತ್ತೀಚೆಗೆ ಅಂದಾಜು 18 ರಿಂದ 20 ಲಕ್ಷ ರೂ. ವೆಚ್ಚದಲ್ಲಿ ಎಸ್​.ಟಿ.ಪಿ.ಘಟಕದಲ್ಲಿ ಕೈಗೊಂಡಿರುವ ಸಿವಿಲ್​ ಕಾಮಗಾರಿ ಬಗ್ಗೆ ಅಲ್ಲಿನ ಕೆಲ ಸಿಬ್ಬಂದಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೆರೆ ಕೋಡಿ ಬಿದ್ದರೂ ತುಟಿಬಿಚ್ಚದ ನಗರಸಭೆ

ಕಳೆದ ಶುಕ್ರವಾರದಂದೇ ಈಚನೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಆದರೆ, ಕಲುಷಿತ ನೀರು ಒಮ್ಮೆ ತಿಳಿಯಾದರೆ ಸಾಕು ಎಂಬ ಕಾರಣಕ್ಕೆ ಮೇಲಿಂದ, ಮೇಲೆ, ಟಿ.ಸುಬ್ರಮಣ್ಯಂ ನಾಲೆಯಲ್ಲಿ ಹರಿಯುತ್ತಿರುವ ನೀರನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉದ್ದೇಶಪೂರ್ವಕವಾಗಿ ಈಚನೂರು ಕೆರೆಗೆ ಪಂಪ್​ ಮಾಡಲಾಗುತ್ತಿದೆ. 2021ರ ನಂತರ ಕೆರೆ ಭರ್ತಿಯಾಗಿದ್ದರೂ, ಸಂಭ್ರಮಾಚರಣೆ ಮಾಡಿ, ಕೆರೆಗೆ ಬಾಗಿನ ಅರ್ಪಿಸುವ ಬದಲು ಈಚನೂರು ಕೆರೆ ಕೋಡಿ ಬಿದ್ದಿರುವ ವಿಷಯವನ್ನೇ ಗೌಪ್ಯವಾಗಿಡಲಾಗಿದೆ. ವಿಪರ್ಯಾಸವೆಂದರೆ, ಒಂದೆಡೆ, ನಾಲೆಯಲ್ಲಿ ಹರಿಯುತ್ತಿರುವ ಕಲುಷಿತ ನೀರು ತುಮಕೂರು ಸೇರುತ್ತಿದ್ದರೆ. ಇನ್ನೊಂದೆಡೆ ಈಚನೂರು ಕೆರೆ ಕೋಡಿ ಮೂಲಕ ಹರಿಯುತ್ತಿರುವ ಕಲುಷಿತ ನೀರು ಮಲ್ಲಾಘಟ್ಟ ಕೆರೆಗೆ ಸೇರುತ್ತಿದೆ.

ಅಂದಾಜು ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಕೆರೆ ಮಧ್ಯೆ ಬದು ನಿರ್ಮಿಸಿ, ಪ್ಲಾಸ್ಟಿಕ್​ ಹೊದಿಕೆ ಹಾಕಿ ಯುಜಿಡಿ ನೀರು ಬೆರೆಯದಂತೆ ಎಚ್ಚರ ವಹಿಸಲಾಗಿತ್ತು. ದುರಾದೃಷ್ಟವಶಾತ್​ ಹೆಚ್ಚು ಮಳೆ ಬಿದ್ದ ಪರಿಣಾಮ ಬದು ಒಡೆದಿದೆ. ಪರೀಕ್ಷೆಗಾಗಿ ನೀರಿನ ಸ್ಯಾಂಪಲ್​ ಕಳಿಸಲಾಗಿದೆ. ಈಚನೂರು ಕೆರೆ ಕೋಡಿ ಬಿದ್ದಿರುವುದು ನಿಜ. | ವಿಶ್ವೇಶ್ವರ ಬದರಗಡೆ. ಆಯುಕ್ತ ನಗರಸಭೆ, ತಿಪಟೂರು.

2021ರ ಜೂನ್​ನಲ್ಲಿ 26 ಕೋಟಿ ರೂ. ವೆಚ್ಚದಲ್ಲಿ ಈಚನೂರು ಕೆರೆಯಲ್ಲಿ ಮ್ಯಾಟ್​ ಅಳವಡಿಸುವ ಕಾಮಗಾರಿ ನನೆಗುದಿಗೆ ಬಿದ್ದಿದೆ. 127 ಕೋಟಿ ರೂ. ವೆಚ್ಚದಲ್ಲಿ 296.75 ಎಂ.ಸಿ.ಎಫ್​.ಟಿ. ಸಾಮರ್ಥ್ಯದ ನೊಣವಿನಕೆರೆಯಿಂದ ನಗರಕ್ಕೆ ಕುಡಿಯವ ನೀರು ತರುವ 24ಘಿ7 ಯೋಜನೆ ಬದಲಿಗೆ ಕೇವಲ 72 ಎಂ.ಸಿ.ಎಫ್​.ಟಿ. ಸಾಮರ್ಥ್ಯವಿರುವ ಈಚನೂರು ಕೆರೆಯಿಂದ ನಗರಕ್ಕೆ ನೀರು ತರುವ ಯೋಚನೆ ಮತ್ತು ಯೋಜನೆಯೇ ಅವೈಜ್ಞಾನಿಕ. ನೊಣವಿನಕೆರೆ ಕೆರೆಯಲ್ಲಿ ತಿಪಟೂರಿನ ಪಾಲಿಗೆ ಮಂಜೂರಾಗಿರುವ 0.3 ಟಿಎಂಸಿ ಹೆಚ್ಚುವರಿ ನೀರನ್ನು ಅಲ್ಲಿ ಶೇಖರಿಸಿ ನಗರದ ಜನತೆಗೆ ಸರಬರಾಜು ಮಾಡಿದರೆ ರೈತರಿಗೂ ಅನ್ಯಾಯವಾಗಲ್ಲ. ನಾಗರಿಕರಿಗೂ ಶುದ್ಧ ಕುಡಿಯುವ ನೀರು ಕೊಟ್ಟಂತಾಗುತ್ತೆ. | ಮಂಜುನಾಥ್​, ಕೊಪ್ಪ ನಿವಾಸಿ

ಸಮಸ್ಯೆ ಎಲ್ಲರಿಗೂ ಗೊತ್ತಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಗೋರ್ಪಾಯ ರೂಪಿಸಲಾಗುತ್ತಿದೆ. ಹಬ್ಬ ಕಳೆದ ನಂತರ ಈಚನೂರು ಕೆರೆಗೆ ಬಾಗಿನ ಅರ್ಪಿಸಲಾಗುವುದು.

| ಕೆ.ಷಡಕ್ಷರಿ ಶಾಸಕರು. ತಿಪಟೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net