

ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಕಾಲಕಾಲಕ್ಕೆ ಹುದ್ದೆಗಳನ್ನು ಭರ್ತಿ ನಡೆಸಿ ವಿವಿಯ ಕಾರ್ಯವನ್ನು ಬಲಪಡಿಸಬೇಕೆಂದು ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ,ಎಂಎಲ್ಸಿ ಟಿ.ಎ.ಶರವಣ ನಿರ್ದೇಶನ ನೀಡಿದರು.
ನಗರದ ಕೃಷಿ ವಿವಿಯ ಸಭಾಂಗಣದಲ್ಲಿ ಬುಧವಾರ ಕೃಷಿ ಇಲಾಖೆಯ ಭರವಸೆ ಸಂಖ್ಯೆ 8191ಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ 2021ರಲ್ಲಿ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದ್ದರು.
ಆ ವೇಳೆ ಕೃಷಿ ಸಚಿವರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾಲ್ಕು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿನ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಸಂಶೋಧಾನ ಕೇಂದ್ರಗಳಲ್ಲಿ ಐಸಿಎಆರ್‌ನಿಂದ ಶೇ.100ರಷ್ಟು ಅನುದಾನಿತ ಕೆವಿಕೆಯಲ್ಲಿ ಖಾಲಿ ಇರುವ 49 ಬೋಧಕರ ಹಾಗೂ 83 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಯಚೂರ ಸೇರಿದಂತೆ ವಿವಿಧ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಲಾಗಿದೆ ಎಂದು ಭರವಸೆ ನೀಡಿದ್ದರು.
ವಿವಿಧ ಕೃಷಿ ವಿಜ್ಞಾನಗಳ ಕೇಂದ್ರಗಳಲ್ಲಿ ಖಾಲಿ ಇದ್ದ 7 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಈಗಾಗಲೇ ನೇಮಕಾತಿ ಮಾಡಿಕೊಳ್ಳಲಾಗಿರುತ್ತದೆ. 1 ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರ ಹುದ್ದೆಯನ್ನು ಸಹ ನೇಮಕಾತಿ ಮಾಡಿದೆ. ಮುಂದುವರೆದು 18 ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯ ಆದೇಶ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ವಿಶ್ವ ವಿದ್ಯಾಲಯದ ಅಂತರ್ಜಾಲದಲ್ಲಿ ಭಿತ್ತರಿಸಲಾಗಿದೆ. ಈ ಹುದ್ದೆಗಳನ್ನು ಬೇಗನೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ಸಂಖ್ಯೆ 8191ಕ್ಕೆ ಈಗಾಗಲೇ ಅನುಪಾಲನಾ ವರದಿ ನೀಡಲಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಅತಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಮಂಜುನಾಥ ಭಂಡಾರಿ, ಕೆ.ಎಸ್.ನವೀನ್, ನಿರಾಣಿ ಹನುಮಂತಪ್ಪ ರುದ್ರಪ್ಪ, ಪ್ರತಾಪ ಸಿಂಹ ನಾಯಕ ಕೆ., ಕೆ.ಆರ್.ಮಹಾಲಕ್ಷ್ಮಿ, ಡಿಸಿ ನಿತೀಶ್ ಕೆ ಸೇರಿ ಅನೇಕರು ಇದ್ದರು.