ಮತದಾರರ ಪಟ್ಟಿ ನ್ಯೂನತೆ ಸರಿಪಡಿಸಲು ಸೂಚನೆ

DC Office Meeting
Published on

ಚಿಕ್ಕಮಗಳೂರು: ಮತದಾರರ ಪಟ್ಟಿಗೆ ಸಂಬಂ„ಸಿದಂತೆ ಯಾವುದೇ ದೂರು ಬರದಂತೆ ಗಮನ ಹರಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ವೀಕ್ಷಕಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳ ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿರುವ ನ್ಯೂನತೆ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಿಎಲ್‍ಒಗಳಿಂದ ನಿಖರ ಮಾಹಿತಿಗೆ ಸಲಹೆ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನಿರ್ದೇಶನ ಮತ್ತು ನಿಯಮದಂತೆ ನಡೆಸಬೇಕು. ಅರ್ಜಿ ನಮೂನೆ 6, 7, 8, ಮತ್ತು 8 ಎ.ನಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕುವುದು ಹಾಗೂ ಸ್ಥಳಾಂತರ ಬಗ್ಗೆ ಬಿಎಲ್‍ಒಗಳಿಂದ ನಿಖರ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 4,67,720, ಪುರುಷರು, 4,73,325 ಮಹಿಳೆಯರು ಹಾಗೂ 40 ಮಂದಿ ಇತರರು ಸೇರಿ ಒಟ್ಟು 9,41,085 ಮತದಾರರಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ 1,66,323, ಮೂಡಿಗೆರೆ 1,68,607, ಚಿಕ್ಕಮಗಳೂರು 2,16,914, ತರೀಕೆರೆ 1,87,021 ಹಾಗೂ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ 2,02,220 ಮತದಾರರಿದ್ದಾರೆ ಎಂದರು.

ನಾಲ್ಕು ದಿನ ವಿಶೇಷ ಅಭಿಯಾನ
ನ. 22, 29, ಡಿ.6 ಮತ್ತು 13 ರಂದು ವಿಶೇಷ ಅಭಿಯಾನ ನಡೆಯಲಿದ್ದು ಜಿಲ್ಲಾಧಿಕಾರಿಗಳು ಪ್ರತಿ ಬಿಎಲ್‍ಒಗಳು ಆ ದಿನಗಳಲ್ಲಿ ಬೂತ್‍ಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಅಂದು ವೀಡಿಯೋ ಚಿತ್ರೀಕರಣ ಮಾಡಬೇಕು. ವೀಡಿಯೋ ಮಾಡಿ ಮಾಹಿತಿ ನೀಡದ ಬಿಎಲ್‍ಒಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕುಟುಂಬದ ಸದಸ್ಯರ ಹೆಸರುಗಳು ಒಂದು ಬೂತ್‍ನಿಂದ ಬೇರೆ ಬೂತ್‍ಗಳಲ್ಲಿ ಇರುವ ಬಗ್ಗೆ ದೂರುಗಳಿದ್ದು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಅವರು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಜಿಪಂ ಸಿಇಒ ಎಸ್.ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ಎ.ಸಿ.ರೇಣುಕಾಪ್ರಸಾದ್, ಎಲ್ಲ ತಾಲೂಕುಗಳ ತಹಸೀಲ್ದಾರ್‍ಗಳು, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net