ಗಣೇಶ ಹಬ್ಬಕ್ಕೆ ವಿಗ್ರಹ ತಯಾರಿ, ಪೂಜೆ ಮಾಡುವ ಭಕ್ತರಿಗೆ ಸೂಚನೆ

ganapathi
Published on

ಮಂಗಳೂರು: ಗಣೇಶ ಹಬ್ಬದ ಆಚರಣೆ ಸಂದರ್ಭ ಗೌರಿ- ಗಣೇಶನ ವಿಗ್ರಹಗಳನ್ನು ತಯಾರಿ ಹಾಗೂ ಖರೀದಿ ಮತ್ತು ವಿಸರ್ಜಿಸುವ ಸಂದರ್ಭಗಳಲ್ಲಿ ಸಾರ್ವಜನಿಕರು ಕೆಲವು ನಿರ್ದಿಷ್ಟ ಅಂಶಗಳ ಬಗ್ಗೆ ಗಮನ ಹರಿಸುವಂತೆ ಬಂಟ್ವಾಳ ಪುರಸಭೆ ಕೋರಿದೆ.
ಗೌರಿ- ಗಣೇಶನ ವಿಗ್ರಹಗಳನ್ನು ತಯಾರಿಸುವವರು ತೈಲ ಬಣ್ಣ, ಅಪಾಯಕಾರಿ ರಾಸಾಯನಿಕ ವಸ್ತುಗಳಿಂದ ಲೇಪಿತವಾಗಿರುವ ವಿಗ್ರಹಗಳನ್ನು ಬಳಸಕೂಡದು ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಮಾಡಿದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಸಂಪೂರ್ಣ ಮಣ್ಣಿನಿಂದ ಮಾಡಿರುವ ಮತ್ತು ನೈಸರ್ಗಿಕ ಬಣ್ಣ ಬಳಸಿರುವ ಗೌರಿ- ಗಣೇಶನ ವಿಗ್ರಹಗಳನ್ನು ಮಾತ್ರ ಖರೀದಿ ಮಾಡಬೇಕು.
ನೈಸರ್ಗಿಕವಾದ ಹೂವು, ಹತ್ತಿ ಮುಂತಾದ ಅಲಂಕಾರಿಕ ವಸ್ತುಗಳನ್ನು ಮಾತ್ರ ಬಳಸುವುದು. ಪ್ಲಾಸ್ಟಿಕ್ ಅಲಂಕಾರಿಕ/ತಳೀರು ತೋರಣಗಳನ್ನು ಬಳಸಬಾರದು.
ಸಂಪೂರ್ಣ ಮಣ್ಣಿನಿಂದ ಮಾಡಿರುವ ಗೌರಿ- ಗಣೇಶನ ವಿಗ್ರಹಗಳನ್ನು ಮಾತ್ರ ಜಲ ಮೂಲ (ನದಿ, ಕೆರೆ ಇತ್ಯಾದಿಗಳ) ಬಳಿ ವಿಸರ್ಜಿಸುವುದು. ವಿಗ್ರಹಗಳನ್ನು ವಿಸರ್ಜನೆ ಮಾಡುವಾಗ ಅಲಂಕಾರಿಕ ವಸ್ತುಗಳಾದ ಹೂ, ಹಾರ ಇತ್ಯಾದಿ ಘನತ್ಯಾಜ್ಯಗಳನ್ನು ನಿಗದಿತ ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ವಿಲೇವಾರಿ ಮಾಡುವುದು.
ಧ್ವನಿವರ್ಧಕ ಅಥವಾ ಸಾರ್ವಜನಿಕ ಗಣೇಶ ಪೆಂಡಾಲ್‌ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣ ಮತ್ತು ಶಬ್ಧ ಉಂಟು ಮಾಡುವ ಉಪಕರಣಗಳ ಬಳಕೆಗೆ ಅನುಮತಿ ಅಥವಾ ಪರವಾನಿಗೆಯನ್ನು ಕೋರಿ ನಿರ್ದಿಷ್ಟ ಅರ್ಜಿ ನಮೂನೆಯನ್ನು ಸಲ್ಲಿಸಿ ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net