ಪಿಂಚಣಿ ಸಮಸ್ಯೆಗೆ ನೇರ ಸ್ಪಂದನೆ, ಅದಾಲತ್‌ನಲ್ಲಿ ಆರ್.ರಾಜರಾಜೇಶ್ವರಿ ಭರವಸೆ

pinchani
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆರ್.ರಾಜರಾಜೇಶ್ವರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಲೆಕ್ಕಾಧಿಕಾರಿಗಳಾದ ಗಾಯತ್ರಿ, ನಾಗಸೇನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ್, ಖಜಾನೆ ಉಪನಿರ್ದೇಶಕ ಗುರುರಾಜ್ ಭಟ್ ಮೊದಲಾದವರಿದ್ದರು.
Published on

ಮಂಗಳೂರು: ನಿವೃತ್ತ ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಪಿಂಚಣಿಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿದರೆ ಸ್ಪಂದನೆ ನೀಡಲಾಗುವುದು ಎಂದು ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆರ್.ರಾಜರಾಜೇಶ್ವರಿ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಂಗಳವಾರ ಕಾರವಾರ, ಉಡುಪಿ ಹಾಗೂ ದ.ಕ.ಜಿಲ್ಲೆಗಳ ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿದ ಅವರು, ಸಮಸ್ಯೆಗಳಿದ್ದರೆ ಪಿಂಚಣಿ ಅದಾಲತ್ ಅಥವಾ ಆರ್‌ಟಿಐ ಮೂಲಕ ಮಾಹಿತಿಗಾಗಿ ಕಾಯುವ ಅಗತ್ಯವಿಲ್ಲ ಎಂದರು.
ಪಿಂಚಣಿ ಅದಾಲತ್ ಆರು ತಿಂಗಳಿಗೊಮ್ಮೆ ನಡೆಸಬೇಕೆಂಬ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಜಿಲ್ಲೆಗಳಲ್ಲೂ ಅದಾಲತ್ ನಡೆಸಿ ಸಮಸ್ಯೆ ಅರಿತುಕೊಳ್ಳಬೇಕು. ಹೀಗಾಗಿ ಆರು ತಿಂಗಳಿಗೊಮ್ಮೆ ನಡೆಸಲು ಕಷ್ಟವಾಗುತ್ತಿದೆ. ಹಾಗಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಪ್ರಯತ್ನಿಸುವುದಾಗಿ ಹೇಳಿದರು.
ಖಜಾನೆ ಇಲಾಖೆ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಕಳೆದ ಒಂದು ತಿಂಗಳಿನಿಂದ ಹಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಾಗಿವೆ. ಶೀಘ್ರದಲ್ಲೇ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಉಡುಪಿ ಮತ್ತು ಕಾರವಾರ ಜಿಲ್ಲೆಗಳ ಪಿಂಚಣಿದಾರರ ಸಮಸ್ಯೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆಲಿಸಿದ ಅವರು, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ದ.ಕ.ಜಿಲ್ಲೆಯ ಪಿಂಚಣಿದಾರರಿಂದ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಂಡರು. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆ ನೀಡಿದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಲೆಕ್ಕಾಧಿಕಾರಿಗಳಾದ ಗಾಯತ್ರಿ, ನಾಗಸೇನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕಾಂತ್, ಖಜಾನೆ ಉಪನಿರ್ದೇಶಕ ಗುರುರಾಜ್ ಭಟ್ ಮೊದಲಾದವರಿದ್ದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಜಂಟಿ ನಿರ್ದೇಶಕಿ ಆರ್. ಮಾಳವಿಕ, ಸಣ್ಣ ಉಳಿತಾಯ ಇಲಾಖೆ ನಿರ್ದೇಶಕಿ ವಾಣಿ ಬಿ. ಉಪಸ್ಥಿತರಿದ್ದರು.

ಆರು ತಿಂಗಳಿಗೊಮ್ಮೆ ಇರಲಿ
ಐವತ್ತಕ್ಕೂ ಅಧಿಕ ಮಂದಿ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿದ್ದರು. ದ.ಕ.ಜಿಲ್ಲೆಯಲ್ಲಿ 10 ಪಿಂಚಣಿದಾರರು ಸಮಸ್ಯೆಗಳನ್ನು ಲಿಖಿತವಾಗಿ ಸಲ್ಲಿಸಿದರು. ಬ್ಯಾಂಕ್‌ಗಳಲ್ಲಿ ಪಿಂಚಣಿದಾರರಿಗೆ ಹಿರಿಯ ನಾಗರಿಕರ ಕೌಂಟರ್ ತೆರೆಯಬೇಕು. ಕಾರವಾರದಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ ಎಂದು ಕಾರವಾರದ ಪಿಂಚಣಿದಾರರ ಸಂಘದ ಅಧ್ಯಕ್ಷರು ಒತ್ತಾಯಿಸಿದರು. ಉಡುಪಿಯ ಪಿಂಚಣಿದಾರರ ಸಂಘದ ಸದಸ್ಯರೊಬ್ಬರು ಪಿಂಚಣಿ ಅದಾಲತ್ ಪ್ರತಿ ಆರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಬೇಡಿಕೆ ಇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net