ಹೊರಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ನೀಡಿ,  ಪಾಲಿಕೆ ಆಯುಕ್ತರಿಗೆ ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ

IMG_20250924_210121_398.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರವೇತನದಡಿ ತರಲು ಕ್ರಮ ವಹಿಸುವಂತೆ ರಾಜ್ಯ ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಹಾನಗರ ಪಾಲಿಕೆಯಲ್ಲಿ ಸದ್ಯ 1001 ಪೌರಕಾರ್ಮಿಕರಿಗೆ ನೇರ ವೇತನವನ್ನು 2020ರಿಂದ ನೀಡಲಾಗುತ್ತಿದೆ. ಆದರೂ 799 ಪೌರಕಾರ್ಮಿಕರು ಗುತ್ತಿಗೆದಾರರಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರಿಗೆ ಗುತ್ತಿಗೆದಾರರು ಪ್ರತಿ ತಿಂಗಳು ಪೂರ್ಣ ಪ್ರಮಾಣದಲ್ಲಿ ವೇತನವನ್ನು ನೀಡುತ್ತಿಲ್ಲ ಹಾಗೂ ಇಎಸ್ಐ ಮತ್ತು ಇಪಿಎಫ್ ವಂತಿಗೆಯನ್ನು ಅವರ ಖಾತೆಗೆ ಭರಣಾ ಮಾಡುತ್ತಿಲ್ಲವೆಂದು ಈವರೆಗೂ ಸಾಕಷ್ಟು ದೂರುಗಳು ನನಗೆ ಮತ್ತು ಸರ್ಕಾರದ ಹಂತಕ್ಕೆ ತಲುಪಿರುತ್ತವೆ ಎಂದು ತಿಳಿಸಿದ್ದಾರೆ.

ಈ ವಿಷಯಕ್ಕೆ ಪುಷ್ಟಿ ನೀಡುವಂತೆ ಸೆ. 20ರಂದು ವಲಯ ಕಚೇರಿ 2ಕ್ಕೆ ಸಂಬಂಧಿಸಿದ ವಾರ್ಡ್ ನಂ. -17ರಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರಕಾರ್ಮಿಕ ಕೃಷ್ಣ ಚಿಕ್ಕಲಗೇರ (ವಜ್ಜಣ್ಣವರ), ಸ್ವಚ್ಚತಾ ಕಾರ್ಯನಿರ್ವಹಿಸುತ್ತಿರುವಾಗಲೇ ಗುತ್ತಿಗೆದಾರ ಕೃಷ್ಣಾ ಅರಬೇಡ ಅವರು ಸರಿಯಾಗಿ ಪ್ರತಿ ತಿಂಗಳು ವೇತನ ನೀಡುತ್ತಿಲ್ಲ ಮತ್ತು ನೀಡುತ್ತಿರುವ ವೇತನದಲ್ಲೂ 5ರಿಂದ 10 ಸಾವಿರ ರೂ. ಕಡಿತ ಮಾಡಿ ಶೋಷಿಸುತ್ತಿದ್ದಾರೆ ಎಂದು ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಈ ಘಟನೆ ಎಲ್ಲ ಮಾಧ್ಯಮಗಳ ಮುಖಾಂತರ ಎಲ್ಲೆಡೆ ಪ್ರಚಾರವಾಗಿದೆ. ಇದು ಪಾಲಿಕೆ ಮತ್ತು ಸರ್ಕಾರದ ಘನತೆಗೆ ಕುಂದು ಉಂಟು ಮಾಡುವ ವಿಷಯವಾಗಿದೆ. ಸಧ್ಯ ಕೃಷ್ಣ ಚಿಕ್ಕಲಗೇರ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಕೇಳಿ ತುಂಬಾ ವಿಷಾದವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

2009ರಿಂದ ಇಲ್ಲಿಯವರೆಗೂ ಪಾಲಿಕೆಯ ಸ್ವಚ್ಚತಾ ಗುತ್ತಿಗೆದಾರರು ಹೊರಗುತ್ತಿಗೆ ಪೌರಕಾಮಿರ್ಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ಶೋಷಣೆಯನ್ನು ತಡೆಗಟ್ಟಲು ಸರ್ಕಾರವು 7.8.2017ರಿಂದ ಎಲ್ಲ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಿ ಸ್ವಚ್ಚತಾ ಕಾರ್ಯಗಳಿಗೆ ಮರು ಟೆಂಡರ್ ಕರೆಯದಂತೆ ಹಾಗೂ ಈಗಿರುವ ಸ್ವಚ್ಚತಾ ಗುತ್ತಿಗೆದಾರರನ್ನು ರದ್ದುಗೊಳಿಸುವಂತೆ ಆದೇಶಿಸಿದೆ.

ಅದರಂತೆ 2020ರಿಂದ 1001 ಪೌರಕಾರ್ಮಿಕರಿಗೆ ನೇರ ವೇತನ ನೀಡಲಾಗಿರುತ್ತದೆ. ಆದಾಗ್ಯೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 799 ಪೌರಕಾರ್ಮಿಕರು ನೇರವೇತನದಿಂದ ಹೊರಗುಳಿದಿದ್ದು, ಶೋಷಣೆಗೆ ನೊಂದು ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ತುಂಬಾ ಶೋಚನಿಯ. ಆದ್ದರಿಂದ ಈಗಾಗಲೇ ಸ್ವಚ್ಚತಾ ಗುತ್ತಿಗೆದಾರರ ಟೆಂಡರ್ ಅವಧಿ ಮುಗಿದು 14 ವರ್ಷಗಳಾಗಿದ್ದು, ಈ ಕೂಡಲೇ ಗುತ್ತಿಗೆದಾರರ ಟೆಂಡರ್ ಗಳನ್ನು ರದ್ದುಪಡಿಸಿ 799 ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನೇರ ವೇತನವನ್ನು ಪಾವತಿಸುವಂತೆ ತಿಳಿಸಿದ್ದಾರೆ. ಪೌರಕಾರ್ಮಿಕರ ಸೇವಾ ಭದ್ರತೆ, ಶೋಷಣೆ ರಹಿತ ಸ್ವಾಭಿಮಾನದ ಬದುಕು ಕಟ್ಟಿಕೊಡಲು ತುರ್ತಾಗಿ ಕಾರ್ಯೋನ್ಮುಖರಾಗುವಂತೆ ಶಾಸಕರು ಪತ್ರದಲ್ಲಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net