ರಘುಪತಿ ಭಟ್, ನನ್ನ ನಡುವೆ ನೇರ ಫೈಟ್: ಎಸ್.ಪಿ.ದಿನೇಶ್

S.P.Dinesh
ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್
Published on

ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪೈಪೋಟಿ ನೀಡುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಗೌಣ ಆಗಿದ್ದಾರೆ. ಹಾಗಾಗಿ ಈ ಬಾರಿ ಮತದಾರರ ನನ್ನ ಕೈಹಿಡಿಯುವುದು ಸ್ಪಷ್ಟವಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಜೂನ್ 3ರಂದು ಚುನಾವಣೆ ನಡೆಯಲಿದ್ದು ಆರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಹಿಂದೆ ಸಿಕ್ಕಿರುವ ಬೆಂಬಲಕ್ಕಿಂತ ಹೆಚ್ಚು ಬೆಂಬಲ ದೊರೆಯುತ್ತಿದೆ. ಈ ಕ್ಷೇತ್ರದ ಮೂರು ಬಾರಿ ಸ್ಪರ್ಧೆ ಮಾಡಿರುವ ಹಿರಿಯ ಅಭ್ಯರ್ಥಿ ನಾನಾಗಿದ್ದು ಎರಡು ಬಾರಿ ಸೋತಿದ್ದರೂ ಪದವೀಧರರ ಅಂತರಾಳವನ್ನು ಅರಿತಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ಶಾಸಕ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಮತ್ತು ನನ್ನ ನಡುವೆ ನೇರ ಫೈಟ್ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ವರ್ಗವು ರಘುಪತಿ ಭಟ್ ಅವರನ್ನು ಕೈಹಿಡಿದರೆ, ಎರಡು ಬಾರಿ ಮತ ಹಾಕಿರುವ ಪದವೀಧರರು ಈ ಸಲವೂ ನನ್ನನ್ನು ಬೆಂಬಲಿಸಲಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು 10 ವರ್ಷದಿಂದಲೇ ಆರ್‌ಎಸ್‌ಎಸ್ ಕಟ್ಟಾಳು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಈಗಿನ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ನನ್ನ ಬಳಿ ಬಂದಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ವಿಶ್ವಾಸವಿದ್ದು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಖಾನೆಯಲ್ಲೇ ಬೆಳೆದು ಅವರ ವಿರುದ್ಧವೇ ಈಗ ತೊಡೆ ತಟ್ಟಿದ್ದಾರೆ. ಮತ್ತೊಂದೆಡೆ ಡಾ. ಧನಂಜಯ ಸರ್ಜಿ ಅವರು ಯಡಿಯೂರಪ್ಪ ಅವರ ಪುತ್ರನ ವಿರುದ್ಧವೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದರೂ ಅಚ್ಚರಿಪಡಬೇಕಿಲ್ಲ ಎಂದರು. ಪ್ರೊ. ಸುಧಾಕರ್, ಪ್ರೊ. ವೆಂಕಟಾಚಲ, ಉಮೇಶ್, ಸಚಿನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net