

ಮೈಸೂರು: ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಹಾಗೂ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ನಿವಾಸ ‘ಉದಯರವಿ’ ಆವರಣದಲ್ಲಿ ಮಂಗಳವಾರ ಕುವೆಂಪು ಜಯಂತಿ ಪ್ರಯುಕ್ತ ದೀಪೋತ್ಸವ, ಕುವೆಂಪು ಗೀತಗಾಯನ ಹಾಗೂ ಬಹುಮಾನ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು.
ಗಾಯಕ ವಿದ್ವಾನ್ ಆರ್.ರಘು ಕುವೆಂಪು ರಚನೆಯ ಗೀತೆಗಳನ್ನು ಹಾಡಿ ರಂಜಿಸಿದರು. ಡಾ.ಸಿ.ಆರ್.ರಾಘವೇಂದ್ರ ಪ್ರಸಾದ್(ರಿದಂಪ್ಯಾಡ್), ವಿದ್ವಾನ್ ಎಸ್. ನಾಗರಾಜು (ತಬಲ), ನಾಗಲಿಂಗು(ರಿದಂಪ್ಯಾಡ್) ಪಕ್ಕವಾದ್ಯದಲ್ಲಿ ಸಹಕರಿಸಿದರು. ಕುವೆಂಪು ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಗೀತಗಾಯನದಲ್ಲಿ ವಿಜೇತರಾದವರು ಸಹ ಕುವೆಂಪು ರಚನೆಯ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.
ಕಾರ್ಯಕ್ರಮದ ಪ್ರಯುಕ್ತ ಉದಯರವಿ ನಿವಾಸದ ಸುತ್ತ ಸ್ವಚ್ಛತಾ ಕಾರ್ಯ ಕೈಗೊಂಡು ನಂತರ ರಂಗೋಲಿ ಬಿಡಿಸಿ ನೂರಾರು ಹಣತೆಗಳನ್ನು ಬೆಳಗಲಾಯಿತು. ಈ ಸಂದರ್ಭ ಗೀತ ಗಾಯನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಕುವೆಂಪು ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕುವೆಂಪು ಮಹಾಮಾನವ. ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ನಿವಾಸದಲ್ಲಿ ಇಂತಹ ವಿಶಿಷ್ಟವಾದ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಕುವೆಂಪು ಸಂದೇಶ ಪ್ರಸ್ತುತ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕುವೆಂಪು ಸಂದೇಶ ಎಲ್ಲರಿಗೂ ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕುವೆಂಪು ಅವರು ಜಾತೀಯತೆ ಹಾಗೂ ಮೌಢ್ಯದ ಕುರಿತು ನೇರವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಅವರ ಚಿಂತನೆ, ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಕುವೆಂಪು ಅವರ ಮನೆಯನ್ನು ಸಾಕಷ್ಟು ಜನರು ನೋಡಿಲ್ಲ. ಜನರಿಗೆ ಕುವೆಂಪು ಅವರ ಮನೆಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ, ಸಾಹಿತಿ ತಾರಿಣಿ ಚಿದಾನಂದ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭಾ ಹಾಗೂ ಇತರರು ಇದ್ದರು.