ದೀಪೋತ್ಸವ ಧರ್ಮಶ್ರದ್ಧೆ, ವಿಶ್ವಾಸಕ್ಕೆ ನಾಂದಿ

05 MDG 2
Published on

ಮುಂಡರಗಿ: ದೀಪದ ಬೆಳಕು ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡಿದಂತೆ, ಮನುಷ್ಯನು ಜೀವನದಲ್ಲಿ ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನದಡಿಗೆ ಬರಬೇಕು. ಹರಿ-ಹರ ಪುತ್ರನಾಗಿ ಜನಿಸಿದ ಅಯ್ಯಪ್ಪಸ್ವಾಮಿ ಭಕ್ತರ ಬಾಳು ಬೆಳಗುತ್ತಿದ್ದಾನೆ. ಲಕ್ಷ ದೀಪೋತ್ಸವ ಮೂಲಕ ಜನತೆಯಲ್ಲಿ ಧರ್ಮಶ್ರದ್ಧೆ, ವಿಶ್ವಾಸ ಮೂಡಿಸುವ ಕೆಲಸವಾಗುತ್ತಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ಪಟ್ಟಣದ ಶ್ರೀ ಅಯ್ಯಪ್ಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಬೆಳ್ಳಟ್ಟಿಯ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ, ಭಾರತವು ವೈಶಿಷ್ಟ್ಯಪೂರ್ಣ ಧಾರ್ಮಿಕ ಸಂಪ್ರದಾಯ ಹೊಂದಿದೆ. ಅಯ್ಯಪ್ಪಸ್ವಾಮಿ ವ್ರತಾಚಾರಣೆ ಮಾಡಿದವರು ಜೀವನಪೂರ್ತಿ ಉತ್ತಮ ಆಚಾರ, ವಿಚಾರಗಳನ್ನು ಅಳವಡಿಸಿಕೊಂಡು ನಡೆದರೆ ಜೀವನವು ಸಾರ್ಥಕವಾಗುತ್ತದೆ. ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನಲು ಮಂಜುನಾಥಗುರುಸ್ವಾಮಿಗಳು ಈ ಭಾಗದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಿರುವುದೇ ಸಾಕ್ಷಿಯಾಗಿದೆ ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ದೀಪ ಬತ್ತಿಯು ತನ್ನನ್ನು ನಾನು ಸುಟ್ಟುಕೊಂಡು ಮತ್ತೊಬ್ಬರಿಗೆ ಬೆಳಕು ನೀಡುತ್ತದೆ. ಮನುಷ್ಯನು ಮತ್ತೊಬ್ಬರಿಗೆ ಕತ್ತಲಾಗದೆ ಬೆಳಕಾಗಬೇಕು. ಬೇರೆಯವರಿಗೆ ನೋವು ಕೊಡದೆ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬಾಳಬೇಕು ಎಂದರು.

ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಜ್ಯೋತಿಯ ಬೆಳಕು ಕತ್ತಲೆಯನ್ನು ಹೋಗಲಾಡಿಸಿದಂತೆ, ಮನಸಿನೊಳಗೆ ಸುಜ್ಞಾನ ಅಳವಡಿಸಿಕೊಂಡು ಅಜ್ಞಾನ ಹೋಗಲಾಡಿಸಬೇಕು. ದೇವಸ್ಥಾನದ ಧಾರ್ಮಿಕ ಮತ್ತುಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ, ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯ ಡಾ. ವೀರೇಶ ಹಂಚಿನಾಳ ಮಾತನಾಡಿದರು.

ದೇವಸ್ಥಾನ ಧರ್ಮದರ್ಶಿ ಮಂಜುನಾಥ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಾಗೇಶ ಹುಬ್ಬಳ್ಳಿ, ಡಾ. ವೀರೇಶ ಹಂಚಿನಾಳ, ಅಮೀನಸಾಬ್ ಬಿಸನಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಸತೀಶ ಕಂಚಗಾರ, ಉಪಾಧ್ಯಕ್ಷ ಹನುಮಂತಸ್ವಾಮಿ ಕುಕನೂರ, ಕಾರ್ಯದರ್ಶಿ ನಾರಾಯಣಸ್ವಾಮಿ ಅಳವಂಡಿ, ಸಹಕಾರ್ಯದರ್ಶಿ ಸಚಿನ್‌ಸ್ವಾಮಿ ಮೇಟಿ, ಖಜಾಂಚಿ ಶಿವಾನಂದಸ್ವಾಮಿ ಪುರದ, ಪ್ರಶಾಂತಸ್ವಾಮಿ ಅಳವಂಡಿ ಇತರರಿದ್ದರು. ಗಿರೀಶಗೌಡ ಪಾಟೀಲ ಸ್ವಾಗತಿಸಿ, ಮುತ್ತು ನಾಗರಹಳ್ಳಿ, ಮಂಜುನಾಥ ಹೊಸಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net