ನ.17ರಿಂದ ಡಿಪ್ಲೊಮಾ ಪರೀಕ್ಷೆ ನೋಂದಣಿ

ADMISSION_STUDENTS_UNIVERSITY
Published on

ಬೆಂಗಳೂರು :  ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಿಂದ 2021ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಸೆಮಿಸ್ಟರ್ ಪರೀಕ್ಷೆ ಬರೆಯಲಿರುವ ಡಿಪ್ಲೊಮಾ ವಿದ್ಯಾರ್ಥಿಗಳ ಪರೀಕ್ಷಾ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗವು ನೀಡಿರುವ ಮಾರ್ಗಸೂಚಿ ಮತ್ತು ಸರ್ಕಾರ ಸಿದ್ಧಪಡಿಸಿರುವ ಪ್ರಮಾಣಿತ ಕಾರ್ಯಸೂಚಿ ವಿಧಾನ(ಎಸ್‌ಒಪಿ)ದ ಅನ್ವಯ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ತಾಂತ್ರಿಕ ಪರೀಕ್ಷಾ ಮಂಡಳಿಯ ವ್ಯಾಪ್ತಿಗೆ ಬರುವ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪಾಲಿಟೆಕ್ನಿಕ್‌ಗಳಿಂದ 2021ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುವ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗುವ ಎಲ್ಲ ಅರ್ಹ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡುವ ಜತೆಗೆ ಶುಲ್ಕ ಪಾವತಿಸಬೇಕು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಯಾವುದೇ ದಂಡಶುಲ್ಕವಿಲ್ಲದೆ ನ.17ರಿಂದ ಡಿಸೆಂಬರ್ 18ರೊಳಗೆ ಶುಲ್ಕ ಪಾವತಿಸಬಹುದಾಗಿದೆ. ದಂಡಶುಲ್ಕ 50 ರೂ.ಸೇರಿ ಡಿ.19ರಿಂದ 28ರವರೆಗೂ ಶುಲ್ಕ ಪಾವತಿಗೆ ಅವಕಾಶವಿದೆ. ಶುಲ್ಕವಿವರ, ಪಾವತಿಯ ವಿಧಾನ, ಕಾಲೇಜಿನ ಪ್ರಾಂಶುಪಾಲರು ನಿರ್ವಹಿಸಬೇಕಾದ ಕಾರ್ಯಗಳ ಸಂಪೂರ್ಣ ಮಾಹಿತಿ ಇಲಾಖೆ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net