ಡಿಪ್ಲೊಮಾ ಕಾಲೇಜ್‌ ಹಳೆಯ ವಿದ್ಯಾರ್ಥಿ ಭವನ ಉದ್ಘಾಟನೆ 15 ರಂದು

Innaguretion
Published on

ಕಾರವಾರ: ಸೆಪ್ಟೆಂಬರ್ 15 ರಂದು ಹಳೆಯ ವಿದ್ಯಾರ್ಥಿ ಸಭಾಭವನ ಉದ್ಘಾಟಿಸಲಿದ್ದೇವೆ ಎಂದು ಎಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ಎಂ.ಗಾಂವಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, 2018 ರಲ್ಲಿ ಹಳೆಯ ವಿದ್ಯಾರ್ಥಿಗಳ ಎರಡನೇ ಸಮ್ಮೇಳನದಲ್ಲಿ ಈ ಕುರಿತು ನಿರ್ಧರಿಸಿ, ಕಾಲೇಜ್ ಆವರಣದಲ್ಲೇ ಸಭಾಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆಗ ಕಟ್ಟಡಕ್ಕೆ 1.25 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಕರೊನಾ ಕಾರಣ ಕಾಮಗಾರಿ ಸ್ವಲ್ಪ ವಿಳಂಬವಾಯಿತು. ಈಗ ಅದರ ವೆಚ್ಚ 1.50 ಕೋಟಿ ರೂ.ತಲುಪಿದೆ. ಆದರೂ ಎರಡು ಮಹಡಿಗಳ ಸುಸಜ್ಜಿತ ಕಟ್ಟಡ ಸಿದ್ಧವಾಗಿದೆ. ಕಟ್ಟಡಕ್ಕೆ ಬೇಕಾದ ಎಲ್ಲ ಖರ್ಚನ್ನು ಕಾಲೇಜ್‌ನ 180 ಹಳೆಯ ವಿದ್ಯಾರ್ಥಿಗಳೇ ದೇಣಿಗೆಯ ಮೂಲಕ ಭರಿಸಿದ್ದಾರೆ ಎಂದು ವಿವರಿಸಿದರು.

ಸೆ.15 ರಂದು ಬೆಳಗ್ಗೆ 10 ಗಂಟೆಗೆ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ವಿವಿಧ ಗಣ್ಯರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಈ ಹಿಂದೆ ಕಾಲೇಜ್‌ನಲ್ಲಿ ಸೇವೆ ಸಲ್ಲಿಸಿದ ಪ್ರಾಚಾರ್ಯರು, ಉಪನ್ಯಾಸಕರನ್ನು, ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಿದ್ದೇವೆ. ಹಳೆಯ ವಿದ್ಯಾರ್ಥಿಗಳ ಮೂರನೇ ಸಮ್ಮಿಲನ ಕೂಡ ನಡೆಯಲಿದೆ ಎಂದು ವಿವರಿಸಿದರು.

1959 ರಲ್ಲಿ ಕಾಲೇಜ್ ಪ್ರಾರಂಭವಾಗಿತ್ತು. 2008 ರಲ್ಲಿ ಹಳೆಯ ವಿದ್ಯಾರ್ಥಿ ಸಂಘ ಹುಟ್ಟು ಹಾಕಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿಧ್ದೇವೆ.ಪ್ರತಿ ವರ್ಷ ಸುಮಾರು 250 ವಿದ್ಯಾರ್ಥಿಗಳು ಹೊರ ಬೀಳುತ್ತಾರೆ. ಅವರಿಂದ ಪ್ರತಿ ವರ್ಷ ಸದಸ್ಯತ್ವ ಮಾಡಿಕೊಳ್ಳಲಿದ್ದೇವೆ. 256 ಆಜೀವ ಸದಸ್ಯರಿದ್ದಾರೆ, ಕಾಲೇಜ್ ಪ್ರಾಂಗಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಮೂರ್ತಿ ಉದ್ಘಾಟಿಸಿದೆವು. ಇನ್ನು ಕಟ್ಟಡವನ್ನೂ ನಿರ್ವಹಣೆ ಮಾಡಲು ಹಣ ಇಟ್ಟುಕೊಂಡಿದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ನಾಗರಾಜ ಜೋಶಿ, ಕಾರ್ಯದರ್ಶಿ ರಾಘವೇಂದ್ರ ಪ್ರಭು, ಖಜಾಂಚಿ ಅಶೋಕ ಶೇಟ್, ಹಿರಿಯ ಸದಸ್ಯ ಎಂ.ಗೋವಿಂದ, ವಿವೇಕ ಭೋಮಕರ್, ಅಚಲ ಭಟ್, ಶಿವರಾಮ ಗಾಂವಕರ್, ಮೊಹಬೂಬ್, ಗುರುದತ್ತ ಬಂಟ್, ಗಿರೀಶ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net