ಸಂಭ್ರಮದ ದೀಪಾವಳಿ ಆಚರಣೆ, ಗೋವುಗಳಿಗೆ ವಿಶೇಷ ಅಲಂಕಾರ, ಹಟ್ಟಿ ಪೂಜೆ,  ಎತ್ತುಗಳ ಮೆರವಣಿಗೆ

IMG_20251022_150442_762.jpg
Published on

ಹುಬ್ಬಳ್ಳಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ದೀಪಾವಳಿ ಅಮಾವಾಸ್ಯೆ ಹಾಗೂ ಮರುದಿನ ಬಲಿ ಪಾಡ್ಯಮಿ ದಿನದಂದು ಎಲ್ಲೆಡೆ ಮಹಾಸರಸ್ವತಿ ಹಾಗೂ ಮಹಾಲಕ್ಷ್ಮಿ ಪೂಜೆ ಭಕ್ತಿ ಭಾವದಿಂದ ಜರುಗಿಸಲಾಯಿತು.

ಅಂಗಡಿ, ಮುಂಗಟ್ಟುಗಳಲ್ಲಿ, ವ್ಯಾಪಾರ ಕೇಂದ್ರಗಳು, ಕಚೇರಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ರೈತರು ಟ್ರಾಕ್ಟರ್, ವಾಣಿಜ್ಯ ವಾಹನಗಳಿಗೆ ಪೂಜೆ ಸಲ್ಲಿಸಿದರು. ಕುಟುಂಬ, ಪರಿವಾರದ ಎಲ್ಲರೂ ಸೇರಿ ದೇವಿ ಆರಾಧನೆ ಮಾಡಿದರು. ಬಂಧು ಬಾಂಧವರು, ಸ್ನೇಹಿತರನ್ನು ಕರೆದು ಸಾಮೂಹಿಕವಾಗಿ ಪೂಜೆ ಮಾಡಿ ಭಕ್ತಿಯಿಂದ ದೇವಿ ಸ್ತುತಿ ಮಾಡಲಾಯಿತು.

ಪಟಾಕಿಗಳ ಚಿತ್ತಾರ ಆಕಾಶಕ್ಕೆ ರಂಗು ತರಿಸಿತ್ತು. ಮಕ್ಕಳು, ಮಹಿಳೆಯರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು. ಎಲ್ಲರೂ ಸಿಹಿ ಭೋಜನ ಸವಿದರು. ಪರಸ್ಪರ ದೀಪಾವಳಿ ಶುಭಾಶಯ ಕೋರಿದರು.

ಹುಬ್ಬಳ್ಳಿ ಎಪಿಎಂಸಿಯಲ್ಲಿ ವ್ಯಾಪಾರಸ್ಥರು ತಮ್ಮ ಮಳಿಗೆ, ಟ್ರೇಡಿಂಗ್ ಕಂಪನಿಗಳಲ್ಲಿ ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆ ನೆರವೇರಿಸಿದರು. ವ್ಯಾಪಾರಸ್ಥರು, ಕೂಲಿಕಾರ್ಮಿಕರು, ರೈತರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಸಮಾರಂಭಗಳಲ್ಲಿ ಪಾಲ್ಗೊಂಡರು.

ಗ್ರಾಮೀಣ ಭಾಗದಲ್ಲಿ ಹಟ್ಟಿ ಪೂಜೆ ಮಾಡುವ ಮೂಲಕ ಲಕ್ಷ್ಮಿ ಆರಾಧನೆ ಮಾಡಲಾಯಿತು. ರೈತರು ಎತ್ತು, ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಊರಲ್ಲಿ ಮೆರವಣಿಗೆ ಹೊರಡಿಸಿದರು. ವಾದ್ಯಮೇಳ, ಕುಂಭಮೇಳಗಳು ಮೆರವಣಿಗೆಗೆ ಮೆರಗು ತಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net